ಶುದ್ಧ ಗಾಳಿ ಕರ್ನಾಟಕದ ೬ ನಗರಗಳಿಗೆ ಸ್ಥಾನ

ನವದೆಹಲಿ,ಡಿ.೯-ದೇಶದ ಹತ್ತು ಅತ್ಯಂತ ಕಲುಷಿತ ನಗರಗಳಲ್ಲಿ ಎಂಟು ನಗರಗಳು ಎನ್.ಸಿ.ಆರ್ ಪ್ರದೇಶದಲ್ಲಿವೆ ಎಂದು ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ ನ ನವೆಂಬರ್ ವರದಿ ತಿಳಿಸಿದೆ. ಗಾಜಿಯಾಬಾದ್ ಅತ್ಯಂತ ಕಲುಷಿತ ನಗರವಾಗಿದ್ದು, ಪ್ರತಿ ಘನ ಮೀಟರ್‌ಗೆ ಮಾಸಿಕ ಸರಾಸರಿ ೨೨೪ ಮೈಕ್ರೋಗ್ರಾಂಗಳಷ್ಟು ಪಿಎಂ ೨.೫ ರಷ್ಟಿದೆ, ನಂತರ ನೋಯ್ಡಾ, ಬಹದ್ದೂರ್‌ಗಢ, ದೆಹಲಿ, ಹಾಪುರ್, ಗ್ರೇಟರ್ ನೋಯ್ಡಾ, ಬಾಗ್‌ಪತ್ ಮತ್ತು ಸೋನಿಪತ್ ಇವೆ. ಕರ್ನಾಟಕದ ಆರು ನಗರಗಳು ಟಾಪ್ ಹತ್ತು ಸ್ವಚ್ಛ-ಶುದ್ಧ ಗಾಳಿ ನಗರಗಳಲ್ಲಿ ಸೇರಿವೆ.ಮೇಘಾಲಯ, ಸಿಕ್ಕಿಂ, ತಮಿಳುನಾಡು ಮತ್ತು ಕೇರಳದ ತಲಾ ಒಂದು ನಗರ ಪಟ್ಟಿಯಲ್ಲಿದೆ.


ದೆಹಲಿಯಲ್ಲಿ ಪಿಎಂ ೨.೫ ಮಟ್ಟವು ಅಕ್ಟೋಬರ್‌ನಲ್ಲಿ ಪ್ರತಿ ಘನ ಮೀಟರ್‌ಗೆ ೧೦೭ ಮೈಕ್ರೋಗ್ರಾಂಗಳಿಂದ ನವೆಂಬರ್‌ನಲ್ಲಿ ಪ್ರತಿ ಘನ ಮೀಟರ್‌ಗೆ ೨೧೫ ಮೈಕ್ರೋಗ್ರಾಂಗಳಿಗೆ ಏರಿದೆ. ದೆಹಲಿಯಲ್ಲಿ ಒಂದು ದಿನವೂ ಈ ತಿಂಗಳು ಶುದ್ಧ ಗಾಳಿಯ ಗುಣಮಟ್ಟದ ಮಾನದಂಡದ (ಪ್ರತಿ ಘನ ಮೀಟರ್‌ಗೆ ೬೦ ಮೈಕ್ರೋಗ್ರಾಂಗಳು) ಒಳಗೆ ಉಳಿದಿಲ್ಲ.
ವರದಿಯ ಗಮನಾರ್ಹ ಅಂಶವೆಂದರೆ, ಕಳೆದ ವರ್ಷ ನವೆಂಬರ್‌ನಲ್ಲಿ ೨೦ ಪ್ರತಿಶತದಷ್ಟು ತ್ಯಾಜ್ಯ ಸುಡುವಿಕೆಯಿಂದ ಉಂಟಾದ ಮಾಲಿನ್ಯವು ಈ ವರ್ಷ ಸರಾಸರಿ ೭ ಪ್ರತಿಶತಕ್ಕೆ ಇಳಿದಿದೆ.

ಇದರ ಹೊರತಾಗಿಯೂ, ಎನ್.ಸಿ.ಆರ್.ನ ೨೦ ನಗರಗಳಲ್ಲಿ ಮಾಲಿನ್ಯವು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ವಾಹನಗಳು, ಕೈಗಾರಿಕೆಗಳು, ವಿದ್ಯುತ್ ಸ್ಥಾವರಗಳು ಮತ್ತು ಇತರ ದಹನ ಮೂಲಗಳಿಂದ ಹೊರಸೂಸುವಿಕೆಯಲ್ಲಿ ಗಣನೀಯ ಇಳಿಕೆಯಾಗದೆ ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು ಕಷ್ಟ ಎನ್ನಲಾಗಿದೆ.


ರಾಜ್ಯಗಳ ಪೈಕಿ ರಾಜಸ್ಥಾನ ಅತಿ ಹೆಚ್ಚು ಮಾಲಿನ್ಯ ನಗರಗಳನ್ನು ಹೊಂದಿದ್ದು, ನವೆಂಬರ್‌ನಲ್ಲಿ ೩೪ ನಗರಗಳಲ್ಲಿ ೨೩ ನಗರಗಳು ರಾಷ್ಟ್ರೀಯ ಮಿತಿಯನ್ನು ಮೀರಿದ್ದವು. ಹರಿಯಾಣದ ೨೫ ನಗರಗಳಲ್ಲಿ ೨೨ ನಗರಗಳು ಮತ್ತು ಉತ್ತರ ಪ್ರದೇಶದ ೨೦ ನಗರಗಳಲ್ಲಿ ೧೪ ನಗರಗಳು, ಮಧ್ಯಪ್ರದೇಶದ ೧೨ ನಗರಗಳಲ್ಲಿ ೯, ಒಡಿಶಾದ ೧೪ ರಲ್ಲಿ ೯ ಮತ್ತು ಪಂಜಾಬ್‌ನ ೮ ರಲ್ಲಿ ೭ ನಗರಗಳಲ್ಲಿ ಮಾನದಂಡಕ್ಕಿಂತ ಹೆಚ್ಚಿನ ಮಾಲಿನ್ಯ ವರದಿಯಾಗಿವೆ.


ಮೇಘಾಲಯದ ಶಿಲ್ಲಾಂಗ್ ವಾಯುವಿನ ಅತ್ಯಂತ ಗುಣಮಟ್ಟದಿಂದ ಉತ್ತಮ ನಗರವಾಗಿದ್ದು, ಮಾಸಿಕ ಸರಾಸರಿ ಪಿಎಂ ೨.೫ ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ ೭ ಮೈಕ್ರೋಗ್ರಾಂಗಳಷ್ಟಿದೆ. ಟಾಪ್ ೧೦ ಉತ್ತಮ ವಾಯುವಿನ ಗುಣಮಟ್ಟ ಹೊಂದಿರುವ ನಗರಗಳಲ್ಲಿ ಕರ್ನಾಟಕದಿಂದ ಆರು ಮತ್ತು ಮೇಘಾಲಯ, ಸಿಕ್ಕಿಂ, ತಮಿಳುನಾಡು ಮತ್ತು ಕೇರಳದಿಂದ ತಲಾ ಒಂದು ಸೇರಿವೆ. ನವೆಂಬರ್‌ನಲ್ಲಿ ದೇಶದ ೨೫೫ ನಗರಗಳ ಪೈಕಿ ಕೇವಲ ೧೧೪ ನಗರಗಳ ಗಾಳಿಯ ಗುಣಮಟ್ಟ ರಾಷ್ಟ್ರೀಯ ಮಾನದಂಡದೊಳಗೆ ಉಳಿದಿದೆ ಎಂದು ವರದಿ ಹೇಳಿದೆ.