
ಶೀರೂರು ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಸರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಉಡುಪಿ ಜನತೆಯ ಸಹಕಾರದಿಂದ ಅತ್ಯಂತ ವ್ಯವಸ್ಥಿತ ಹಾಗೂ ವೈಭವಯುತವಾಗಿ ಶ್ರದ್ಧಾ ಭಕ್ತಿಯಿಂದ ನಡೆಸಲು ಪೊಡವಿಗೊಡೆಯ ಶ್ರೀಕೃಷ್ಣನ ನಗರಿ ಉಡುಪಿ ಸಜ್ಜಾಗಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷರಾದ ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.
ಸುಮಾರು ೨ ಲಕ್ಷ್ಮಕ್ಕೂ ಮಿಕ್ಕಿ ಭಕ್ತರು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಜನವರಿ ೧೭ ರಾತ್ರಿ ಕೂಡಾ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
೫ ಮಂದಿ ಸಾಧಕರಿಗೆ ಶೀರೂರು ಪರ್ಯಾಯ ದರ್ಬಾರ್ ಕೃಷ್ಣಾನುಗ್ರಹ ಪ್ರಶಸ್ತಿ:
ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರಿಗೆ ಶೀರೂರು ಶ್ರೀಪಾದರು ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ
ಶೀರೂರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ತಮ್ಮ ಚತುರ್ಥ ಪರ್ಯಾಯ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಿದ ಪರ್ಯಾಯ ಪುತ್ತಿಗೆ ಮಠದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಸಂಜೆ ೪.೩೦ಕ್ಕೆ ಗಂಟೆಗೆ ರಥಬೀದಿಯ ಪೂರ್ಣ ಪ್ರಜ್ಞಾ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕ ಯಶ್ ಪಾಲ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೀರೂರು ಪರ್ಯಾಯದ ವಿದ್ಯುತ್ ದೀಪಾಲಂಕಾರದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮೊದಲ ಬಾರಿಗೆ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಸಿಂಗಾರಗೊಂಡ ನಗರಗಳು, ಪರ್ಯಾಯದ ಸಿದ್ಧತೆಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಸಂತೋಷವಾಗಿದೆ ಎಂದರು. ನಗರದ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ನ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ ಪರ್ಯಾಯ ಕಾರ್ಯಕ್ರಮಕ್ಕೆ ಹೆಚ್ವಿನ ಮೆರುಗು ನೀಡಲು ಈ ಬಾರಿ ವಿಶೇಷ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ ಎಂದರು. ಅದೇ ರೀತಿ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಮಾಡಿದ ಕೃಷ್ಣ ಕುಲಾಲ್ ಅವರನ್ನು ಶಾಸಕರು ಅಭಿನಂದಿಸಿದರು.
ಶೀರೂರು ಪರ್ಯಾಯಕ್ಕೆ ಉಡುಪಿ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇದರ ಮೆರುಗು ಹೆಚ್ಚಿಸಲು ಈ ಬಾರಿ ಉಡುಪಿ ನಗರಸಭೆ ಅನುದಾನದೊಂದಿಗೆ ೫೦ಲಕ್ಷ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕೆನರಾಬ್ಯಾಂಕ್ ನ ಜಿ ಎಂ ಗಂಗಾಧರ್, ನಗರ ಸಭೆ ಆಯುಕ್ತ ಮಹಾಂತೇಶ್ ,ನಗರ ಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್ ಪೂಜಾರಿ, ರಜನಿ ಹೆಬ್ಬಾರ್ , ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರ್ , ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ್ ಹೆಗ್ಡೆ, ಮಹಿಳಾ ಘಟಕದ ಪದ್ಮಲತಾ, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ , ಪ್ರಚಾರ ಸಮಿತಿ ಸಂಚಾಲಕ ನಂದನ್ ಜೈನ್ ,ವಿಷ್ಣು ಮೂರ್ತಿ ಆಚಾರ್ಯಮೊದಲಾದವರು ಉಪಸ್ಥಿತರಿದ್ದರು.




























