
ಸಂಜೆವಾಣಿ ನ್ಯೂಸ್
ಮೈಸೂರು: ನ.11:– ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರಕ್ಕೆ ಸ್ವಾಯತ್ತತೆ ಬೇಕು ಹಾಗೂ ನಿರ್ದೇಶಕರನ್ನು ನಿಯೋಜಿಸಬೇಕು ಎಂದು ಚಿಂತಕ, ವಿಮರ್ಶಕ ಪೆÇ್ರ.ರಹಮತ್ ತರೀಕೆರೆ ಸಲಹೆ ನೀಡಿದರು.
ಹುಣಸೂರು ರಸ್ತೆಯಲ್ಲಿರುವ ಭಾರತೀಯ ಭಾಷಾ ಸಂಸ್ಥಾನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 52 ವಾರಗಳ ಕಾಲ ನಡೆದ ಶಾಸ್ತ್ರೀಯ ಕನ್ನಡ ನಿತ್ಯೋತ್ಸವ ಅಂತರ್ಜಾಲ ಉಪನ್ಯಾಸ ಸರಣಿಯ ಸಮಾರೋಪ ಸಮಾರಂಭದದಲ್ಲಿ ಮಾತನಾಡಿದ ಅವರು, ಶಾಸ್ತ್ರೀಯ ಕನ್ನಡ ಕೇಂದ್ರ ಕಟ್ಟಲು ಮೂರು ಸಲಹೆಗಳನ್ನು ರಹಮತ್ ತರೀಕೆರೆ ನೀಡಿದರು. ಶಾಸ್ತ್ರೀಯ ಕೇಂದ್ರವೂ ರೂಪಾಂತರ ಪಡೆಯಬೇಕಿದೆ. ಸಮುದಾಯ ಮತ್ತು ಸಂಸ್ಕೃತಿ ಕಡೆಗೆ ಚಲಿಸಬೇಕಿದೆ. ಭಾಷೆ ಮತ್ತು ಸಾಹಿತ್ಯದ ಅತೀ ಭಾರದಿಂದ ಹೊರಬರಬೇಕು. ಅಕ್ಷರ ಕೇಂದ್ರದಿಂದ ಡಿಜಿಟಲ್ ಕಡೆ ಹೋಗಬೇಕಿದೆ.
ಏಕ ಶಿಸ್ತು, ಅಂತರ್ ಶಿಸ್ತಿನಿಂದ ಬಹುಶಿಸ್ತಿನ ಕಡೆ ಹೋಗಬೇಕಿದೆ. ಕಲ್ಚರಲ್ ಸ್ಟಡಿಯನ್ನು ಬಹುಶಿಸ್ತೀಯವಾಗಿ ಮಾಡಬೇಕಿದೆ. ಗತ ಕೇಂದ್ರದಿಂದ ವರ್ತಮಾನಕ್ಕೆ ರೂಪಾಂತರಗೊಳ್ಳಬೇಕಿದೆ. ಶಾಸ್ತ್ರೀಯ ಭಾಷೆಯ ಕೃತಕ ಗಡಿಯನ್ನು ಹೊಡೆಯಬೇಕಿದೆ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು 50 ವರ್ಷಗಳಿಂದ ಡಿಕ್ಷನರಿಯನ್ನು ಅಪಡೇಟ್ ಮಾಡಿಲ್ಲ. ಡಿಕ್ಷನರಿಯಲ್ಲಿ ಶೇ.25 ಭಾಗ ಇದೆ. ಶೇ. 75 ಭಾಗ ಹೊರಗಿದೆ. ಗ್ರಾಮೀಣ ಪರಿಭಾಷೆಯ ಪದಗಳು ಸೇರ್ಪಡೆಯಾಗಿಲ್ಲ. ಡಿಕ್ಷನರಿಯನ್ನು ಡಿಜಿಟಲ್‍ಗೆ ರೂಪಾಂತರಿಸುವ ಕಾರ್ಯ ಜರೂರು ಆಗಿದೆ ಎಂದು ಹೇಳಿದರು.
ಭಾರತದ ಎಲ್ಲ ಭಾಷೆಗಳು ಶಾಸ್ತ್ರೀಯ ಭಾಷೆಗಳಾಗಿವೆ. ತಮಿಳಿಗೆ ಬಂದು ಕನ್ನಡಕ್ಕೆ ಬರದಿದ್ದಾಗ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದೆವು. ತುಳು, ಲಂಬಾಣಿಗೆ ಯಾಕೆ ಶಾಸ್ತ್ರೀಯ ಮಾನ್ಯತೆ ದೊರೆಯಲಿಲ್ಲ ಎಂದು ಪ್ರಶ್ನಿಸಲಿಲ್ಲ. ಭಾರತದ ಎಲ್ಲ ಭಾಷೆಗಳಿಗೆ ಯಾಕೆ ಮಾನ್ಯತೆ ಇಲ್ಲ ಎಂದು ರಹಮತ್ ತರೀಕೆರೆ ಪ್ರಶ್ನಿಸಿದರು.
ಸಂಶೋಧನೆಗಳು ಅಕ್ಷರ ಕೇಂದ್ರಿತವಾಗಿವೆ. ಶಾಸ್ತ್ರೀಯ ಕೆಲಸಗಳಿಗೆ ಯುವಕರನ್ನು ತಯಾರು ಮಾಡಬೇಕಿದೆ. ಶಾಸ್ತ್ರೀಯ ಕೇಂದ್ರಗಳು ಸೇರಿ ಎಲ್ಲ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು. ಉನ್ನತ ಶಿಕ್ಷಣಕ್ಕೆ ಆದ್ಯತೆ ಕೊಡುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದು ಹೇಳಿದರು.
ನವ ಸಂಶೋಧಕರನ್ನು ಕನ್ನಡ ಸಂಶೋಧನೆಗೆ ಪರಿಚಯಿಸಬೇಕಿದೆ. ಪ್ರಸ್ತುತ ನಾವೆಲ್ಲರೂ ಹಿರಿಯ ತಲೆಮಾರಿನ ವಿದ್ವಾಂಸರ ಸಂಶೋಧನೆಗಳ ಮೇಲಷ್ಟೇ ಅವಲಂಬಿತವಾಗಿದ್ದೇವೆ. ಇದು ಬದಲಾಗಬೇಕು, ಹೊಸ ತಲೆಮಾರಿಗೆ ಮಾದರಿಯಾಗುವ ವಾಚಿಕೆಗಳ, ಕಮ್ಮಟಗಳ, ಅಧ್ಯಯನ ಶಿಬಿರಗಳ, ಹಳೆಗನ್ನಡ ಓದು, ಅರ್ಥೈಸುವಿಕೆ, ವಿಮರ್ಶೆ, ವಿಶಿಷ್ಟ ಸಾಹಿತ್ಯ ಅಧ್ಯಯನಗಳ ಓದು ಇವುಗಳ ಅವಶ್ಯಕತೆ ಕನ್ನಡಕ್ಕೆ ಬಹಳಷ್ಟಿದೆ ಎಂದರು.
ಬಹುತ್ವದಲ್ಲಿ ಭಾರತದ ಅಸ್ತಿತ್ವ ಇದೆ. ಒಬ್ಬ ನಾಯಕ, ಒಂದು ಪಕ್ಷ, ಒಂದು ಭಾಷೆ ಎನ್ನುವುದಾದರೆ ಭಾರತ ಕುಸಿಯುತ್ತದೆ. ಕನ್ನಡಿಗರು ಕರ್ನಾಟಕ ಏಕೀಕರಣ ಮತ್ತು ಭಾರತದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದಾರೆ ಎಂದು ತಿಳಿಸಿದರು.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಡಾ.ಶೈಲೇಂದ್ರ ಮೋಹನ್, ಕೇಂದ್ರದ ಯೋಜನಾ ನಿರ್ದೇಶಕ ಪೆÇ್ರ.ಎನ್.ಎಂ. ತಳವಾರ, ಎಲ್.ಆರ್.ಪ್ರೇಮ್ ಕುಮಾರ್ ಇದ್ದರು.


























