ಶಾಸಕಿ ಭಾಗೀರಥೀ ಮುರುಳ್ಯ ಅವರಿಂದ ಅಂಬೆಡ್ಕರ್ ಭವನ ವೀಕ್ಷಣೆ; ಅನುದಾನ ಮಂಜೂರು – ತ್ವರಿತವಾಗಿ ಕಾಮಗಾರಿ ಮುಗಿಸಲು ಸೂಚನೆ

ಸುಳ್ಯ:ಸುಳ್ಯದ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಬಿಡುಗಡೆಗೆ ಸಮ್ಮತಿಸಿದ್ದು ಈ ಹಿನ್ನಲೆಯಲ್ಲಿ ಅರ್ಧದಲ್ಲಿ ಬಾಕಿಯಾದ ಭವನದ ಕಾಮಗಾರಿ ವೀಕ್ಷಣೆ ಮಾಡಿ ಅಧಿಕಾರಿಗಳ ಸಭೆ ನಡೆಸಿದರು.
೧೫ ವರ್ಷಗಳಿಂದ ಅನುದಾನದ ಕೊರತೆಯಿಂದ ನೆನೆಗುದಿಗೆ ಬಿದ್ದ ಸುಳ್ಯದ ಅಂಬೇಡ್ಕರ್ ಭವನದ ಕೆಲಸ ಕಾರ್ಯಗಳಿಗೆ ವೇಗ ಹೆಚ್ಚಿಸಲು ಸೋಮವಾರ ಶಾಸಕಿ ಭಾಗೀರಥಿ ಮುರುಳ್ಯ ಭವನದ ಕಾಮಗಾರಿ ವೀಕ್ಷಣೆ ಮಾಡಿ ಅದರ ಸುತ್ತಲೂ ಬೆಳೆದಿರುವ ಗಿಡ ಬಳ್ಳಿಗಳನ್ನು ತೆಗೆಯಲು ಸೂಚನೆ ನೀಡಿದರು. ಭವನಕ್ಕೆ ನಿಮಾಣಕ್ಕೆ ಒಟ್ಟು ೫.೧೦ ಕೋಟಿ ಅನುದಾನದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದ್ದು ಅದರಂತೆ ಎರಡು ಕೋಟಿ ರೂಪಾಯಿಗಳಲ್ಲಿ ಅನುದಾನ ಬಿಡುಗಡೆಗೊಂಡು ಭವನದ ಫಿಲ್ಲರ್ ಮತ್ತು ಸ್ಲಾಬ್‌ಗಳ ಕೆಲಸ ಆಗಿದೆ. ಇನ್ನು ಉಳಿದ ೩.೧೦ ಕೋಟಿ ಅನುದಾನ ಬಿಡುಗಡೆಗೆ ಸಮಾಜ ಕಲ್ಯಾಣ ಇಲಾಖೆಗೆ ಕೋರಿಕೊಂಡ ಮನವಿ ಮೇರೆಗೆ ಅನುದಾನ ಬಿಡುಗಡೆಗೆ ಒಪ್ಪಿದ್ದು, ಕೂಡಲೇ ಅಂದಾಜು ಪಟ್ಟಿಯನ್ನು ತಯಾರಿಸಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸುವ ಕೆಲಸ ಆಗಬೆಕು. ಈ ನಿಟ್ಟಿನಲ್ಲಿ ಕಾಮಗಾರಿ ತ್ವರಿತವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ನೀಲಿನಕ್ಷೆ ಮತ್ತು ಅಂದಾಜು ಪಟ್ಟಿ ತಯಾರಿಸಿ ಕೂಡಲೇ ನೀಡಬೇಕು ಹಾಗೂ ಮುಂದಿನ ತಿಂಗಳಿನಲ್ಲೆ ಟೆಂಡರ್ ಹಂತಕ್ಕೆ ಬಂದು ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭವಾಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಮುಂದಿನ ಬಾರಿಯ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು ನೂತನವಾಗಿ ನಿರ್ಮಾಣವಾದ ಭವನದಲ್ಲಿ ಆಗುವಂತೆ ಮಾಡಲು ಅಧಿಕಾರಿಗಳು ಸಹಕರಿಸಬೇಕು ಎಂದು ಹೇಳಿದರು.
ಭವನದ ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಲು ಸಾರ್ವಜನಿಕರು ಮತ್ತು ನಾಯಕರನ್ನು ಸೇರಿಸಿಕೊಂಡು ಸಮಿತಿ ರಚಿಸುವ ಕುರಿತು ಮುಂದಿನ ವಾರ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಇದೇ ವೇಳೆ ಹೇಳಿದರು.
ಈ ಸಂದರ್ಭದಲ್ಲಿ ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಮಾಜಿ ಜಿ.ಪಂ. ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಮಾಜಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋಪಾಲ. ಕೆ, ಸಹಾಯಕ ಅಭಿಯಂತರ ಪರಮೇಶ್ವರ. ಪಿ, ಜಿಲ್ಲಾ ಪಂಚಾಯತ್ ವಿಭಾಗದ ಎಇಇ ಫಯಾಝ್ ಅಹಮ್ಮದ್, ಇಂಜಿನಿಯರ್ ಮಣಿಕಂಠ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್, ಗುತ್ತಿಗೆದಾರ ಯೋಗೀಶ್ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ ನಂದಿನಿ , ಸ್ಮಿತಾ, ಪ್ರಮುಖರಾದ ಸುಭೋದ್ ಶೆಟ್ಟಿ ಮೇನಾಲ, ಬಾಲಕೃಷ್ಣ ಕೀಲಾಡಿ, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.