
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.31-ತಾಲೂಕಿನ ಉಡಿಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಶಾಲೆಗೆ ಬಂದ ಮಕ್ಕಳನ್ನು ಗುಲಾಬಿ ಹೂ, ಸಿಹಿ ನೀಡಿ ಸ್ವಾಗತಿಸಲಾಯಿತು.
ಶಾಲಾ ಪ್ರಾರಂಭೋತ್ಸವ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಮಕ್ಕಳು ಬ್ಯಾಂಡ್ ಬಾರಿಸುತ್ತಾ. ಶಾಲೆಗೆ ಬಾ ಮಗು, ಹೆಣ್ಣೊಂದು ಕಲಿತರೇ ಶಾಲೆವೊಂದು ತೆರೆದಂತೆ ಎಂಬ ಘೋಷಣೆಯೊಂದಿಗೆ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಎಸ್‍ಡಿಎಂಸಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಶಿಕ್ಷಕರು ಮೆರವಣಿಗೆಯ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತ ಕೋರಿದರು.
ಉಡಿಗಾಲ ಗ್ರಾ.ಪಂ. ಅಧ್ಯಕ್ಷೆ ರೇಖಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಹೂ, ಸಿಹಿ ನೀಡಿ ಸ್ವಾಗತಿಸಿ ಮಾತನಾಡಿ, ಮಕ್ಕಳು ಶಾಲೆ ಪ್ರಾರಂಭದ ದಿನದಿಂದಲೇ ಉತ್ಸಾಹದಿಂದ ಶಾಲೆಗೆ ಬರಬೇಕೆಂಬ ಉದ್ದೇಶದಿಂದ ಸರ್ಕಾರ ಈ ವ್ಯವಸ್ಥೆ ಮಾಡಿದೆ. ಮೊದಲ ದಿನವೇ ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ನೀಡುವ ಮೂಲಕ ಕಲಿಕೆಗೆ ಸಹಕಾರಿಯಾಗಿದೆ. ಹೀಗಾಗಿ ಪೋಷಕರು ಸಹ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಅಲ್ಲದೇ ಮಕ್ಕಳ ಕಲಿಕೆಯ ಬಗ್ಗೆ ಆಗಿಂದ್ದಾಗೆ ಶಾಲೆಗೆ ಭೇಟಿ ನೀಡಿ, ತಿಳಿದು ಕೊಳ್ಲುವ ಜೊತೆಗೆ ಶಾಲೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕು. ಶಿಕ್ಷಕರಿಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.
ಸಿಆರ್‍ಪಿ ಸಂಪತ್‍ಕುಮಾರ್ ಮಾತನಾಡಿ, ಉಡಿಗಾಲ ಗ್ರಾಮದ ಶಾಲೆಯಲ್ಲಿ ಪ್ರಸಕ್ತ ವರ್ಷದಿಂದಲೇ ಎಲ್‍ಕೆಜಿ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಗುತ್ತಿದೆ. ಗ್ರಾಮಸ್ಥರು ಸಹ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಬೇಕು. ಮಕ್ಕಳ ಗುಣಮಟ್ಟದ ಶಿಕ್ಷಣ ಜೊತೆಗೆ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ. ನಮ್ಮೂರ ಶಾಲೆ, ನಮ್ಮ ಶಾಲೆ ಎಂಬ ಅಭಿಮಾನವನ್ನು ಬೆಳೆಸಿಕೊಂಡು ಶಾಲೆಯ ಅಭಿವೃದ್ದಿಗೆ ಎಲ್ಲರು ಕಂಕಣ ಬದ್ದರಾಗೋಣ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಮಹದೇವಮ್ಮ, ಎಸ್‍ಡಿಎಂಸಿ ಅಧ್ಯಕ್ಷ ದೇವಣ್ಣ, ಸಿಆರ್‍ಪಿ ಸಂಪತ್‍ಕುಮಾರ್, ಶಿಕ್ಷಕರಾದ ಪ್ರಸಾದ್, ಚನ್ನಬಸವಣ್ಣ, ವೀನಾ, ರಾಜೇಶ್ವರಿ, ಪದ್ಮಾವತಿ, ವಿಜಯಲಕ್ಷ್ಮಿ, ಎಸ್‍ಡಿಎಂಸಿ ಸದಸ್ಯರಾದ ಮಹದೇವಸ್ವಾಮಿ, ಪ್ರಕಾಶ್, ಶೀಲಾ, ಶೋಭಾ, ಬಸವರಾಜನಾಯಕ, ಮಾದನಾಯಕ್, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಬಳಿಕ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸಲಾಯಿತು, ಮದ್ಯಾಹ್ನ ಬಿಸಿಯೂಟದಲ್ಲಿ ಪಾಯಸ ಬೂಂದಿಯೊಂದಿಗೆ ಸಿಹಿ ಊಟ ವ್ಯವಸ್ಥೆ ಮಾಡಲಾಗಿತ್ತು.