
ಮಂಗಳೂರು: ಮಂಗಳೂರಿನ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ, ದೀಪಾವಳಿ, ಗೋಪೂಜೆ ಹಾಗೂ ಭಾರತಮಾತಾ ಪೂಜನ ಸಹಿತ “ಹಬ್ಬಗಳ ಸಂಗಮ” ಎಂಬ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹತ್ವದ ಕಾರ್ಯಕ್ರಮಗಳನ್ನು ಅತ್ಯಂತ ಸಂಭ್ರಮೋಲ್ಲಾಸದಿಂದ ವಿದ್ಯಾಸಂಸ್ಥೆಯ ಭೂವರಾಹ ಬಯಲು ಸಭಾಂಗಣದಲ್ಲಿ ಆಚರಿಸಲಾಯಿತು. ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಡಾ| ಎಂ.ಬಿ.ಪುರಾಣಿಕರು ಈ ಸಂದರ್ಭದಲ್ಲಿ ಆಶಯ ಭಾಷಣವಿತ್ತರು. ಜಗತ್ತಿನ ಅತ್ಯಂತ ಪ್ರಾಚೀನ ಸಂಸ್ಕೃತಿಗಳೆನಿಸಿದ ಗ್ರೀಕ್, ರೋಮನ್, ಈಜಿಪ್ಟ್ ಇತ್ಯಾದಿಗಳು ಅಳಿದು ಹೋಗಿದ್ದರೂ ಭಾರತದ ನಮ್ಮ ಸನಾತನ ಧರ್ಮ-ಸಂಸ್ಕೃತಿ ದೃಡವಾಗಿ ಉಳಿಯಲು ನಮ್ಮ ಹಿರಿಯರು, ಋಷಿ ಮುನಿಗಳು ನಮಗೆ ಉಪದೇಶಿಸಿರುವ ಶಾಶ್ವತವಾದ ಜೀವನ ಮೌಲ್ಯಯುಕ್ತ, ಶ್ರೇಷ್ಠ ಸಂಪ್ರದಾಯ ಶಿಕ್ಷಣ, ಸಂಸ್ಕಾರಗಳೇ ಕಾರಣ. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿ ಸಮೂಹ ನಮ್ಮ ಹಿರಿಯರು ಹಾಕಿಕೊಟ್ಟಿರುವ ಶ್ರೇಷ್ಠ ಆಚರಣೆಗಳ ಮೌಲ್ಯಗಳನ್ನು ಅರಿತು ಆಚರಿಸುವ ಮೂಲಕ ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಬೇಕಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಮಕ್ಕಳೆಂದರೆ ಕೇವಲ ಕುಟುಂಬದ ಆಸ್ತಿಯಷ್ಟೇ ಅಲ್ಲ, ರಾಷ್ಟ್ರದ ಆಸ್ತಿಯಾಗಿದ್ದಾರೆ ಎಂದು ಡಾ| ಪುರಾಣಿಕರು ದೀಪಾವಳಿ, ಗೋಪೂಜೆ ಹಾಗೂ ಮಕ್ಕಳ ದಿನಾಚರಣೆಯ ಆಚರಣೆಯ ಮಹತ್ವಗಳನ್ನು ಈ ಸಂದರ್ಭದಲ್ಲಿ ವಿವರಿಸುತ್ತಾ ಅಭಿಪ್ರಾಯವಿತ್ತರು. ಹಬ್ಬಗಳ ಸಂಗಮ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಗೂಡುದೀಪಗಳನ್ನು ತಯಾರಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಕರ್ಷಕ ಗೂಡುದೀಪಗಳನ್ನು ರಚಿಸಿದ ವಿದ್ಯಾರ್ಥಿಗಳ ಪರಿಶ್ರಮ- ಉತ್ಸಾಹದ ಕುರಿತು ಶ್ಲಾಘನೆಯ ಮಾತುಗಳನ್ನಾಡಿ ಹೆತ್ತವರ ಸಹಕಾರ, ಪ್ರೋತ್ಸಾಹಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಂಗವಾಗಿ ವಿದ್ಯಾಲಯದ ವಿದ್ಯಾರ್ಥಿ ಬಳಗದವರು ಹಾಗೂ ಶಾರದಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಂದರ್ಭಿಕ ಮಹತ್ವದ ಗೀತೆಗಳನ್ನು ಹಾಡಿದರು. ಅದೇ ರೀತಿ ವಿದ್ಯಾಲಯದ ನೃತ್ಯ ಶಿಕ್ಷಕಿ ಶ್ರೀಮತಿ ಶುಭಾ ಶೇಷಾದ್ರಿಯವರ ನಿರ್ದೇಶನದಲ್ಲಿ ಶಾರದಾ ವಿದ್ಯಾಲಯ ವಿದ್ಯಾರ್ಥಿನಿಯರು ಆಕರ್ಷಕ ನೃತ್ಯ ಪ್ರದರ್ಶನವಿತ್ತರು. ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಕು| ವೈಷ್ಣವಿ ಭಟ್ (ಸ್ಯಾಕ್ಸೊಪೋನ್), ಕು| ಅಮೃತಾ (ಸಿತಾರ್), ಮಾ| ಸಾಯಿಸಂಕೇತ್ (ಕೊಳಲು) ಇವರು ವಾದ್ಯ ಸಂಗೀತದ ಸುಮಧುರ ಸಂಗೀತ ಪ್ರಸ್ತುತಿಗೈದು ಎಲ್ಲರನ್ನೂ ರಂಜಿಸಿದರು. ಇದೇ ಸಂದರ್ಭದಲ್ಲಿ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ-೨೦೨೫ರ ಪುರಸ್ಕೃತರಾದ ಮುಂಡಾಜೆ ಯಂಗ್ ಚಾಲೆಂಜರ್‍ಸ್ ಸ್ಪೋರ್ಟ್ಸ್ ಕ್ಲಬ್‌ನ
ಸದಸ್ಯರಾದ, ಯಕ್ಷಗಾನ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಸೇವೆ ಸಲ್ಲಿಸುತ್ತಿರುವ ಶ್ರೀ ದಿನೇಶ್ ಆಚಾರ್ಯರನ್ನು ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ವತಿಯಿಂದ ವೇದಿಕೆಯಲ್ಲಿ ಗೌರವಿಸಿ ಸನ್ಮಾನಪತ್ರ ನೀಡಲಾಯಿತು. ಅದೇ ರೀತಿ ಅತ್ಯಂತ ಆಕರ್ಷಕ ಹಾಗೂ ವಿಶೇಷ ಗೂಡುದೀಪಗಳನ್ನು ರಚಿಸಿ ಪ್ರದರ್ಶಿಸಿದ ಶ್ರೀ ವಿಠಲ್ ಭಟ್ ಮತ್ತು ರಕ್ಷಿತ್ ಕೋಟೆಕಣಿ ಇವರನ್ನು ಕೂಡಾ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಶಾರದಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ ಕುಮಾರ ಕಲ್ಕೂರ, ವಿಶ್ವಸ್ಥರಾದ ಶ್ರೀ ಸುಧಾಕರ ರಾವ್ ಪೇಜಾವರ, ಆಡಳಿತ ನಿರ್ದೇಶಕರಾದ ಶ್ರೀ ಸಮೀರ್ ಪುರಾಣಿಕ್, ಅಲ್ಲದೆ ಶ್ರೀಮತಿ ಸುನಂದ ಪುರಾಣಿಕ್, ಶ್ರೀಮತಿ ಪ್ರೀತಿ ಪುರಾಣಿಕ್, ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಎಲ್ಲಾ ಪ್ರಾಂಶುಪಾಲರುಗಳು ಹಾಗೂ ಮುಖ್ಯಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾಲಯದ ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಸ್ವಾಗತ ಹಾಗೂ ಪ್ರಸ್ತಾವನೆಗೈದರು. ಶಿಕ್ಷಕಿ ಶ್ರೀಮತಿ ನಂದಿತಾರಾಣಿ ವಂದನಾರ್ಪಣೆಗೈದರು. ವಿದ್ಯಾಲಯದ ಶಿಕ್ಷಕಿಯರಾದ ಶ್ರೀಮತಿ ಅಶ್ವಿನಿ ಕಿಣಿ, ಶ್ರೀಮತಿ ದೀಕ್ಷಾ ಪ್ರಭು ಮತ್ತು ಶ್ರೀಮತಿ ಶೀಲಾಕ್ಷಿ ಕಾರ್ಯಕ್ರಮ ನಿರ್ವಹಣೆಗೈದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.



























