
ಮಂಗಳೂರು: ಮಂಗಳೂರು ಮಹಾನಗರದ ಕೊಡಿಯಾಲ್ ಬೈಲಿನ ಶಾರದಾ ವಿದ್ಯಾಲಯದಲ್ಲಿ ಈ ದಿನ ಶ್ರೀರಾಮನವಮಿ ಆಚರಣೆಯು ಅತ್ಯಂತ ಸಂಭ್ರಮೋಲ್ಲಾಸದಿಂದ ನೆರವೇರಿತು. ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಬಿ ಪುರಾಣಿಕರು ಈ ಸಂದರ್ಭದಲ್ಲಿ ವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಗವಾನ್ ಶ್ರೀರಾಮಚಂದ್ರನು ಆದರ್ಶ ರಾಜನಾಗಿ, ಆದರ್ಶ ಪುತ್ರನಾಗಿ, ಪತಿಯಾಗಿ, ಸಹೋದರನಾಗಿ, ಪ್ರಜಾರಕ್ಷಕನಾಗಿ, ಲೋಕದಲ್ಲಿ ಆದರ್ಶಗಳನ್ನು ಮೆರೆದ ಮಹಾ ಪುರುಷನಾಗಿದ್ದಾನೆ. ವಿದ್ಯಾರ್ಥಿಗಳು ಶ್ರೀರಾಮನಂತಹ ಆದರ್ಶ ಮಹಾಪುರುಷರ ಜೀವನದ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ, ರಾಷ್ಟ್ರಕ್ಕೆ ಕೀರ್ತಿ ತರುವಂತಹ ಕಾರ್ಯದಲ್ಲಿ ತೊಡಗಬೇಕು ಎಂದು ಅಭಿಪ್ರಾಯವಿತ್ತ ಡಾ. ಎಮ್. ಬಿ ಪುರಾಣಿಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ವಿಶ್ವಸ್ಥರಾದ ಶ್ರೀ ಸಮೀರ್ ಪುರಾಣಿಕ್, ವಿದ್ಯಾಲಯದ ಪ್ರಾಂಶುಪಾಲರುಗಳಾದ ಶ್ರೀಮತಿ ಚಂದ್ರಿಕಾ ಭಂಡಾರಿ, ಶ್ರೀ ದಯಾನಂದ ಕಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಂಗವಾಗಿ ವಿದ್ಯಾಲಯದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹನುಮಾನ್ ಚಾಲೀಸಾ, ಏಕಶ್ಲೋಕಿ ರಾಮಾಯಣ ಪಠಣ ಗೈದರು. ಅದೇ ರೀತಿ ಭಜನೆ ಹಾಡಿದರು. ವಿದ್ಯಾರ್ಥಿಗಳಾದ ಅಭಿನಂದನ್ ಕಿರಣ್ ಬಿಡಿ, ದಿಗಂತ್ ಕಾರಂತ್, ವಿದ್ಯಾರ್ಥಿನಿಯರಾದ ಧಾರಿಣಿ ಮತ್ತು ಸಮನ್ವಿತ ಶ್ರೀ ರಾಮನವಮಿಯ ಮಹತ್ವ ಹಾಗೂ ಭಗವಾನ್ ಶ್ರೀರಾಮಚಂದ್ರನ ಗುಣವೈಶಿಷ್ಟ್ಯಗಳ ಬಗ್ಗೆ ಕಿರು ಭಾಷಣ ಗೈದರು. ವಿದ್ಯಾರ್ಥಿನಿ ಕುಮಾರಿ ಶ್ರೀಯಾಶೆಟ್ಟಿ ಸ್ವಾಗತ, ಧನ್ಯವಾದ ಹಾಗೂ ಕಾರ್ಯಕ್ರಮ ನಿರೂಪಣೆ ಗೈದಳು. ವಿದ್ಯಾಲಯದ ಶಿಕ್ಷಕಿಯರಾದ ಶ್ರೀಮತಿ ದೀಕ್ಷಾ ಪ್ರಭು ಮತ್ತು ಶ್ರೀಮತಿ ಅಶ್ವಿನಿ ಕಿಣಿ ಕಾರ್ಯಕ್ರಮ ಸಂಯೋಜಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಶುಭ ಸಮಾಪ್ತಿಗೊಂಡಿತು.























