ಶಾರದಾ ವಿದ್ಯಾಲಯದಲ್ಲಿ ’ಗೀತಾ ಜಯಂತಿ’ ಸಂಭ್ರಮಾಚರಣೆ

ಮಂಗಳೂರು- ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ’ಗೀತಾ ಜಯಂತಿ’ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲಾಯಿತು. ಇಸ್ಕಾನ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಜಯ ಬ್ಯಾಂಕಿನ ನಿವೃತ್ತ ಹಿರಿಯ ಪ್ರಭಂದಕರಾದ ಶ್ರೀ ಬಾಲಕೃಷ್ಣ ರೈ ಮತ್ತು ಮೂಲ್ಕಿ ವಿಜಯ ಕಾಲೇಜಿನ ಪದವಿಪೂರ್ವ ವಿಭಾಗದ ಸಂಸ್ಕೃತ ಉಪನ್ಯಾಸಕರಾದ ಶ್ರೀ ಶ್ರೀಕರ ಉಪಾಧ್ಯಾಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಗೀತಾಚಾರ್ಯರಾದ ಭಗವಾನ್ ಶ್ರೀ ಕೃಷ್ಣನು ಶ್ರೀಮದ್ ಭಗವದ್ಗೀತೆಯಲ್ಲಿ ಉಪದೇಶಿಸಿದ ತತ್ವ ಸಂದೇಶಗಳ ಪಾಲನೆಯಿಂದ ಜೀವನದಲ್ಲಿ ಬರುವ ದುಃಖ, ವಿಪತ್ತುಗಳೆಲ್ಲಾ ದೂರವಾಗಿ ನಮ್ಮ ಬದುಕು ಪಾವನಗಾಗುವುದು ಎಂಬುದಾಗಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಬಾಲಕೃಷ್ಣ ರೈಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಅಭಿಪ್ರಾಯವಿತ್ತರು.
ಇನ್ನೊರ್ವ ಅತಿಥಿಗಳಾದ ಶ್ರೀ ಶ್ರೀಕರ ಉಪಾಧ್ಯಾಯರು ಈ ಸಂದರ್ಭದಲ್ಲಿ ಉಪನ್ಯಾಸ ನೀಡಿ ಬಂಧುವರ್ಗದ ಮೋಹದಿಂದ ಕರ್ತವ್ಯಮೂಡನಾದ ಶ್ರೀ ಕೃಷ್ಣನು ಗೀತೋಪದೇಶದ ಮೂಲಕ ಕರ್ತವ್ಯ ಪ್ರಜ್ಞೆಯನ್ನು ಜಾಗೃತಿಗೊಳಿಸಿದ ಸಂದರ್ಭವನ್ನು ವಿವರಿಸಿ ಗೀತೆಯ ಮಹತ್ವಪೂರ್ಣ ವಿಚಾರಗಳನ್ನು ವಿವರಿಸಿದರು. ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ| ಎಂ.ಬಿ.ಪುರಾಣಿಕರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಗವದ್ಗೀತೆಯ ಪಾರಾಯಣದಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೆ ಗೀತೆಯ ಸಂದೇಶಗಳು ಅತ್ಯಂತ ಉಪಯುಕ್ತವಾಗಿವೆ ಎಂಬುದಾಗಿ ಡಾ| ಪುರಾಣಿಕರು ಅಧ್ಯಕ್ಷೀಯ ನುಡಿಯಲ್ಲಿ ಆಶಯ ವ್ಯಕ್ತಪಡಿಸಿದರು. ಶಾರದಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರರವರು ಈ ಸಂದರ್ಭದಲ್ಲಿ ಮಾತನಾಡಿ ವೇದೋಪನಿಷತ್ತುಗಳ ಸಾರದಂತಿರುವ ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮಗಳ ಪಠಣದಿಂದ ಹಾಗೂ ಅರ್ಥಗ್ರಹನದಿಂದ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಭರಿತ ಶಿಕ್ಷಣ ದೊರೆಯುವುದಲ್ಲದೆ ನಮ್ಮ ರಾಷ್ಟ್ರ ಜೀವನವು ಉಜ್ವಲಗೊಳ್ಳುವುದು ಎಂಬುದಾಗಿ ಸಂದೇಶವಿತ್ತರು.
ಪ್ರತಿಭಾ ಪುರಸ್ಕಾರ : ಶೃಂಗೇರಿ ಶಾರದಾ ಪೀಠದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಸಂಪೂರ್ಣ ಭಗವದ್ಗೀತಾ ಕಂಠಪಾಠ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆ ಹೊಂದಿದ ವಿದ್ಯಾಲಯದ ೬ನೇ ತರಗತಿಯ ವಿದ್ಯಾರ್ಥಿ ಚಿ| ಮಿಥಿಲ್ ಕೃಷ್ಣ ಭಟ್ ಮತ್ತು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಇವರು ಡಿಸೆಂಬರ್ ೨೦೨೪ರಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶ್ರೀಮದ್ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ ವಿದ್ಯಾಲಯದ ೫ನೇ ತರಗತಿಯ ವಿದ್ಯಾರ್ಥಿ ಚಿ| ಪ್ರಾಂಶು ನಾವಡನಿಗೆ ಅಧ್ಯಕ್ಷರು ಹಾಗೂ ಅತಿಥಿಗಳು ಹಾರಾರ್ಪಣೆಗೈದು ಸ್ಮರಣಿಕೆಯನ್ನಿತ್ತು ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರಗೈದರು.
ಶಾರದಾ ಸಮೂಹ ಸಂಸ್ಥೆಗಳ ವಿಶ್ವಸ್ಥರಾದ ಶ್ರೀ ಸುಧಾಕರ ರಾವ್ ಪೇಜಾವರ, ವಿದ್ಯಾಲಯದ ಪ್ರಾಂಶುಪಾಲರುಗಳಾದ ಶ್ರೀಮತಿ ಚಂದ್ರಿಕಾ ಭಂಡಾರಿ ಮತ್ತು ಶ್ರೀ ದಯಾನಂದ ಕಟೀಲ್ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಬಳಿಕ ವಿದ್ಯಾ ಸಂಸ್ಥೆಯ ಧ್ಯಾನಮಂದಿರ ಸಭಾಂಗಣದಲ್ಲಿ ೧೮ ಅಧ್ಯಾಯಗಳ ೭೦೦ ಶ್ಲೋಕಗಳ ಪಾರಾಯಣ ನಡೆಯಿತು.
ವಿದ್ಯಾಲಯದ ಸಂಸ್ಕೃತ ವಿಭಾಗದ ಅಧ್ಯಾಪಿಕೆಯರಾದ ಶ್ರೀಮತಿ ದೀಕ್ಷಾ ಪ್ರಭು, ಕು| ಅಶ್ವಿನಿ ಕಿಣಿ, ಕು| ಮೇಘನಾ ರಾವ್ ಮಾರ್ಗದರ್ಶನವಿತ್ತರು. ಗೀತಾ ಆರತಿ ಬಳಿಕ ಶಾಂತಿ ಮಂತ್ರದೊಂದಿಗೆ ’ಗೀತಾ ಜಯಂತಿ’ ಕಾರ್ಯಕ್ರಮವು ಶುಭ ಸಮಾಪ್ತಿಗೊಂಡಿತು.