ಶಾರದಾ ವಿದ್ಯಾಲಯದಲ್ಲಿ ಕಿಂಡರ್‌ಗಾರ್ಟನ್ ಸ್ಪೋರ್ಟ್ಸ್ ಡೇ ಆಯೋಜನೆ

ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ನರ್ಸರಿ ಹಾಗೂ ಪೂರ್ವ-ಪ್ರಾಥಮಿಕ (ಎಲ್.ಕೆ.ಜಿ., ಯು.ಕೆ.ಜಿ.) ತರಗತಿಗಳ ವಿದ್ಯಾರ್ಥಿಗಳಿಗಾಗಿ ‘ಕಿಂಡರ್‌ಗಾರ್ಟನ್ ಸ್ಪೋರ್ಟ್ಸ್ ಡೇ’ಯನ್ನು ವಿದ್ಯಾಸಂಸ್ಥೆಯ ಭೂವರಾಹ ಬಯಲು ಸಭಾಂಗಣದಲ್ಲಿ ಆಯೋಜಿಸಲಾಯಿತು. ಕೊಡಿಯಾಲಬೈಲಿನ ‘ಯೂರೋ ಕಿಡ್ಸ್’ ಸಂಸ್ಥೆಯ ಪ್ರಾಂಶುಪಾಲೆ ಹಾಗೂ ಪಾಲುದಾರರಾದ ಶ್ರೀಮತಿ ಆರತಿ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ| ಎಂ.ಬಿ.ಪುರಾಣಿಕರು ವಹಿಸಿದ್ದರು. ಮಕ್ಕಳಿಗೆ ಎಳವೆಯಲ್ಲೇ ನಮ್ಮ ಭಾರತೀಯ ಸಂಸ್ಕೃತಿ ಆಧಾರಿತ ಉತ್ತಮ ಸಂಸ್ಕಾರಭರಿತ ಶಿಕ್ಷಣವನ್ನು ನೀಡುತ್ತಿರುವ ಶಾರದಾ ವಿದ್ಯಾಲಯದ ಚಟುವಟಿಕೆಗಳು ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಪುಟಾಣಿ ಮಕ್ಕಳಿಗೆ ಶುಭ ಹಾರೈಸಿದರು.
ಕಪಟತನವಿಲ್ಲದ, ಮುಗ್ದ ಸ್ವಭಾವದ ಮುದ್ದು ಪುಟಾಣಿಗಳು ದೇವರ ಸ್ವರೂಪವಾಗಿದ್ದಾರೆ. ‘ಬೆಳೆಯ ಸಿರಿ ಮೊಳಕೆಯಲ್ಲೆ ಎಂಬ ಗಾದೆ ಮಾತಿನಂತೆ ಎಳೆಯ ಪ್ರಾಯದಲ್ಲಿ ಮಕ್ಕಳಿಗೆ ಉತ್ತಮ ಗುಣ-ನಡತೆಯ ಸಂಸ್ಕಾರಭರಿತ ಶಿಕ್ಷಣವನ್ನು ಒದಗಿಸಿದರೆ ಭವಿಷ್ಯದಲ್ಲಿ ದೇಶದ ಉತ್ತಮ ನಾಗರಿಕರೆನಿಸಬಲ್ಲರು. ‘ಮನೆಯೇ ಮೊದಲ ಪಾಠಶಾಲೆ’ ಎಂಬಂತೆ ಮನೆಯಲ್ಲಿ ಕೂಡಾ ಅವರಿಗೆ ಉತ್ತಮ ಸಂಸ್ಕಾರ ದೊರಕುವಂತಾಗಬೇಕು. ಮುದ್ದು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹೆತ್ತವರು ಕೂಡಾ ಸಮಯವನ್ನು ಮೀಸಲಿಡಬೇಕು. ಆ ಮೂಲಕ ಭವಿಷ್ಯದ ಭಾರತ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಲು ಸಾಧ್ಯವಿದೆ ಎಂಬುದಾಗಿ ಡಾ| ಎಂ.ಬಿ.ಪುರಾಣಿಕರು ಅಧ್ಯಕ್ಷೀಯ ನುಡಿಯಲ್ಲಿ ಅಭಿಪ್ರಾಯವಿತ್ತು ಮುದ್ದು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಹಾರೈಸಿದರು.
ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಚಂದ್ರಿಕಾ ಭಂಡಾರಿಯವರು ಈ ಸಂದರ್ಭದಲ್ಲಿ ಮಾತನಾಡಿ ಬಾಲ್ಯದಿಂದಲೇ ಮಕ್ಕಳಿಗೆ ಶಿಸ್ತುಬದ್ಧ ಶಿಕ್ಷಣದ ಜೊತೆಗೆ ಶಾರೀರಿಕ, ಮಾನಸಿಕ ವಿಕಾಸಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ ಎಂದರು. ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ, ಆಡಳಿತ ನಿರ್ದೇಶಕ ಹಾಗೂ ವಿಶ್ವಸ್ಥರಾದ ಶ್ರೀ ಸಮೀರ್ ಪುರಾಣಿಕ್, ವಿದ್ಯಾಲಯದ ಉಪ-ಪ್ರಾಂಶುಪಾಲೆ ಶ್ರೀಮತಿ ಕೆ. ಲಕ್ಷ್ಮೀ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಪ್ರಾಸ್ತಾವಿಕ ಮಾತನಾಡಿ ಶಾರದಾ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡು ಬರುತ್ತಿರುವ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಮಹತ್ವದ ಚಟುವಟಿಕೆಗಳ ವಿವರಗಳನ್ನು ನೀಡಿ ಸ್ವಾಗತಗೈದರು. ಪೂರ್ವ ಪ್ರಾಥಮಿಕ ತರಗತಿಗಳ ಮುಖ್ಯಸ್ಥೆ ಶ್ರೀಮತಿ ನೈನಾ ಕುಂದರ್ ವಂದನಾರ್ಪಣೆಗೈದರು. ಶಿಕ್ಷಕಿ ಶ್ರೀಮತಿ ಅಂಜನಾ ಮಾಧವ ಅತ್ತಾವರ್ ಸಭಾ ಕಾರ್ಯಕ್ರಮದ ನಿರ್ವಹಣೆಗೈದರು. ಉದ್ಘಾಟನಾ ಸಮಾರಂಭಕ್ಕೆ ಮುನ್ನ ಮುದ್ದು ಪುಟಾಣಿಗಳು ಸೂರ್ಯ, ನಕ್ಷತ್ರ, ಮೊಲದ ಕಿವಿಯನ್ನು ಹೋಲುವ ತಲೆಪಟ್ಟಿಯನ್ನು ಧರಿಸಿ ಮ್ಯೂಸಿಕ್ ಬ್ಯಾಂಡ್‌ನ ಲಯಬದ್ಧ ಸರಿಯಾಗಿ ಆಕರ್ಷಕ ಪಥ ಸಂಚಲನಗೈದರು. ಅದೇ ರೀತಿ ನರ್ತನಗೈದು ಸಂಭವಿಸಿದರು. ಅಣಕು ಕ್ರೀಡಾಜ್ಯೋತಿಯ ಸಾಂಕೇತಿಕ ಓಟದೊಂದಿಗೆ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಬಳಿಕ ನರ್ಸರಿ ಹಾಗೂ ಕೆ.ಜಿ. ವಿಭಾಗದ ಮುದ್ದು ಪುಟಾಣಿಗಳು ಹಾಗೂ ಹೆತ್ತವರಿಗೆ ವೈವಿಧ್ಯಮಯ ಮನೋರಂಜಕ ಆಟೋಟಗಳ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಿ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕಿಯರಾದ ಶ್ರೀಮತಿ ಎಡ್ನಾ ವೇಗಸ್ ಮತ್ತು ಶ್ರೀಮತಿ ನೀರಜಾ ಹರೀಶ್ ಕ್ರೀಡಾಕೂಟದ ನಿರ್ವಹಣೆಗೈದರು.