
ಮಂಗಳೂರು : ೦೧.೧೨.೨೦೨೫ ಶ್ರೀ ಕೃಷ್ಣನಿಂದ ಉಪದೇಶಿಸಲ್ಪಟ್ಟ ಗೀತೆ ನಿಜವಾದ ಅರ್ಥದಲ್ಲಿ ಮನುಜಕುಲಕ್ಕೆ ನೀಡಿದ ಅಮೃತ ಗೀತೆ. ಮಾನವನ ಕಲ್ಮಷಯುಕ್ತ ಮನಸ್ಸನ್ನು ನಿಯಂತ್ರಿಸುವ ಮನೋನಿರ್ವಹನಶಾಸ್ತ್ರವಾಗಿ ಜಗತ್ತಿಗೆ ಬೆಳಕಾಗಿರುವ ಸುಜ್ಣಾನದ ಸಾರವೇ ಭಗವದ್ಗೀತೆ ಎಂಬುದಾಗಿ ಮಂಗಳೂರಿನ ಮ್ಯಾಪ್ಸ್ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಶ್ರೀಮತೀ ಶೈಲಜಾ ಅಭಿಪ್ರಾಯಪಟ್ಟರು. ಇವರು ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜು ಸಂಸ್ಕ್ರತ ಸಂಘದ ಆಶ್ರಯದಲ್ಲಿ ಶ್ರೀ ಸೋಂದಾ ಸ್ವರ್ಣದಲ್ಲಿ ಮಹಾಸಂಸ್ಥಾನದ ಭಗವದ್ಗೀತಾ ಅಭಿಯಾನದ ಅಂಗವಾಗಿ ನಡೆದ ಗೀತಾಪಾರಾಯಣ ಹಾಗೂ ಗೀತಾ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಸುರೀ ಶಕ್ತಿಗಳನ್ನು ಗೆಲ್ಲಬೇಕಾದರೆ ನಮ್ಮೊಳಗೆ ದೈವೀ ಶಕ್ತಿಯನ್ನು ಜಾಗೃತಗೊಳಿಸಬೇಕು. ಆಸೆಯನ್ನು ಗೆದ್ದ ಮನಸ್ಸನ್ನು ಅತ್ಯಂತ ಆನಂದಗೊಳಿಸುವ ಉಪಾಯವನ್ನು ಜಗದ್ಗುರುವಾದ ಶ್ರೀ ಕೃಷ್ಣಪರಮಾತ್ಮ ಗೀತೆಯ ಮೂಲಕ ಉಣಬಡಿಸಿದ್ದಾನೆ. ಹಾಗಾಗಿ ಆರೋಗ್ಯಪೂರ್ಣ ಮನಸ್ಸನ್ನು ಹೊಂದಲು ಭಗವದ್ಗೀತೆ ಅತ್ಯಂತ ಸಹಕಾರಿ ಎಂದು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರರವರು ಮಾತನಾಡಿ ವೇದ ಉಪನಿಷತ್ತುಗಳ ಸಾರವಾದ ಭಗವದ್ಗೀತೆ ಜೀವನಕ್ಕೆ ಬೆಳಕಾಗುವ ಸರಳಸೂತ್ರಗಳನ್ನು ಗೀತೆಯಲ್ಲಿ ಉಪದೇಶಿಸಿದೆ. ಗೀತೆಯ ಜ್ಣಾನದ ಬೆಳಕು ನಮ್ಮ ಅಂತರಂಗವನ್ನು ಬೆಳಗುವಂತಾಗಬೇಕು. ?ಶ್ರದ್ದಾವಾನ್ ಲಭತೇ ಜ್ಣಾನಂ? ಎನ್ನುವ ಗೀತೋಕ್ತಿಗೆ ಅನ್ವರ್ಥವಾಗಿ ನಡೆದುಕೊಂಡು ಸುಜ್ಣಾನಿಗಳಾಗಬೇಕು ಎಂದು ಹೇಳಿದರು.
ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ. ಪ್ರಕಾಶ್ ನಾಯ್ಕ್ ಹಾಗೂ ಉಪಪ್ರಾಚಾರ್ಯರಾದ ಶ್ರೀಮತಿ ಅರುಣಾ ದಿನೇಶ್, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀ ರಮೇಶ್ ಆಚಾರ್ಯ ನಾರಳ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕು| ದಿಯಾ ಶೆಟ್ಟಿ ಹಾಗೂ ಕು| ಧರಿತ್ರಿ ಸೋಮಯಾಜಿ ಗೀತೆಯ ಮಹತ್ವದ ಬಗ್ಗೆ ಮಾತನಾಡಿದರು. ೨೦೨೪ರಲ್ಲಿ ರಾಜ್ಯಮಟ್ಟದಲ್ಲಿ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಕು| ಪ್ರಾಂಜಲಿ ನಾವಡ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಾದ ಕು| ಪ್ರಾಂಜಲಿ ಸ್ವಾಗತಿಸಿ ಕು| ಪ್ರೇಕ್ಷಣಾ ಭಟ್ ಧನ್ಯವಾದವಿತ್ತರು. ಕು| ತನ್ವಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಗಳಿಂದ ಸಾಮೂಹಿಕ ಗೀತಾಪಾರಾಯಣ ನಡೆಯಿತು.




























