ವೃತಾಚರಣೆಗಳು ಕಲಿಕೆಯ ಹಾದಿಯಾಗಬೇಕು

ಪುತ್ತೂರು; ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಹಬ್ಬ ಮತ್ತು ವೃಥಾಚರಣೆಗಳು ಕೇವಲ ಆಚರಣೆಯಾಗದೆ ಬದುಕಿಗೆ ಕಲಿಕೆಯ ಹಾದಿಯಾಗಬೇಕು. ಸಾಂಪ್ರದಾಯಿಕವಾಗಿ ಬಂದ ಪ್ರತಿಯೊಂದು ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಮುಂದಿನ ಪೀಳಿಗೆ ಅದನ್ನು ಅನುಸರಿಸುವಂತೆ ಮಾಡುವುದು ಅತೀ ಅಗತ್ಯ ಎಂದು ಮಂಗಳೂರಿನ ಶ್ರೀನಿವಾಸ್ ಕಾಲೇಜಿನ ಉಪನ್ಯಾಸಕಿ ಡಾ.ವೀಣಾ ಸಂತೋಷ್ ರೈ ಅಭಿಪ್ರಾಯಪಟ್ಟರು.


ಪುತ್ತೂರು ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಸಮರ್ಪಣಾ ಮಹಿಳಾ ಸಂಸ್ಥೆ, ವರಮಹಾಲಕ್ಷ್ಮೀ ಪೂಜೆ ಸಮಿತಿ ವತಿಯಿಂದ ಹಾಗೂ ಒಡಿಯೂರು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ೧೮ನೇ ವರ್ಷದ ವರಮಹಾಲಕ್ಷ್ಮಿ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆಯೊಂದು ಸ್ವರ್ಗವಾಗಬೇಕಾದರೆ ಅದರಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ. ಪ್ರತೀ ದಿನವನ್ನೂ ಅತ್ಯಂತ ಉತ್ತಮವಾಗಿಸಿಕೊಳ್ಳುವ ನೋಡಿಕೊಳ್ಳುವ ಜವಾಬ್ದಾರಿಯೂ ಮಹಿಳೆಯರದ್ದಾಗಿದೆ. ನಮ್ಮಲ್ಲಿರಬೇಕಾದ ಮನೋಸ್ಥೈರ್ಯ ಜೀವನದ ಯಶಸ್ಸಿಗೆ ದಾರಿಯಾಗಬೇಕು. ಹಾಗಾಗಿ ನಾವು ಖುಷಿಯಲ್ಲಿರುವುದೇ ಸಮಾಜಕ್ಕೆ ನಾವು ಕೊಡುವ ದೊಡ್ಡ ಕೊಡುಗೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರು ಕಳೆದ ೧೮ ವರ್ಷಗಳಿಂದ ಮಹಾಲಿಂಗೇಶ್ವರ ದೇವರ ಕೃಪೆಯಿಂದ ಅತ್ಯಂತ ಶ್ರದ್ಧಾಪೂರ್ವಕವಾಗಿ ನಡೆದುಕೊಂಡು ಬರುತ್ತಿದೆ. ಮೊದಲ ೨ ವರ್ಷ ಇದನ್ನು ಅರುಣ್‌ಕುಮಾರ್ ಪುತ್ತಿಲ ನಡೆಸುತ್ತಿದ್ದರು. ಬಳಿಕ ಅವರು ಬಂದು ನನ್ನಲ್ಲಿ ನೀವು ಇದರ ನೇತೃತ್ವ ವಹಿಸಿಕೊಂಡು ಮಾಡಬೇಕು ಎಂದು ಹೇಳಿದರು. ಇದು ದೇವರ ಕೃಪೆ ಎಂದು ಕೊಂಡು ನಡೆಸುತ್ತಲೇ ಬಂದಿದ್ದೇವೆ. ಇಲ್ಲಿ ನಾನು ಎಂದು ಕೊಂಡವರನ್ನು ಮಹಾಲಿಂಗೇಶ್ವರ ಯಾವತ್ತೂ ಮೆರೆಯಲು ಬಿಟ್ಟಿಲ್ಲ. ಇಲ್ಲಿ ಎಲ್ಲವೂ ಮಹಾಲಿಂಗೇಶ್ವರ ಎಂದು ತಿಳಿದುಕೊಂಡವರನ್ನು ಅವನು ಯಾವತ್ತೂ ಕೈಬಿಟ್ಟಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಲಕ್ಷ್ಮಿ ಅಂದರೆ ಸಂಪತ್ತು. ಆದರೆ ದುಡ್ಡು ಮಾತ್ರವಲ್ಲ. ಆರೋಗ್ಯ, ನೆಮ್ಮದಿ, ಸಂತಾನವೂ ಸಂಪತ್ತು. ಪುತ್ತೂರು ದೇವಳ ಹಾಗೂ ವಠಾರ ಯಾರಿಗೋ ಒಬ್ಬರಿಗೆ ಮೀಸಲಲ್ಲ. ಇಲ್ಲಿ ಎಲ್ಲಾ ಸಂಘಟನೆಗಳ ಕಾರ್ಯಕ್ರಮಗಳೂ ನಡೆಯುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಸಹಸ್ತ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಡಾ.ರಮ್ಯಾ ರಾಜರಾಮ್, ರಕ್ಷಾ ಉಜ್ವಲ್, ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ಸುಭಾಷ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ, ಒಡಿಯೂರು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನಾ ರೈ, ಸಮರ್ಪಣ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷೆ ಗಂಗಾರತ್ನ ವಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಸದಸ್ಯೆ ಜಯಂತಿ ಬಲ್ನಾಡು, ವಿಜಯ ಸರಸ್ವತಿ ಎಡಕ್ಕಾನ, ಪರಮೇಶ್ವರಿ ಶೆಟ್ಟಿ, ಶಾರದಾ ಕೇಶವ್, ರಾಜೇಶ್ವರಿ, ಯಮುನಾ, ವತ್ಸಲ ಪದ್ಮನಾಭ ಶೆಟ್ಟಿ, ಅನುಶ್ರೀ, ಮಲ್ಲಿಕಾ ಸುಭಾಶ್ ರೈ, ಅನ್ನಪೂರ್ಣ ಕುತ್ಯಾಡಿ ಅತಿಥಿಗಳನ್ನು ಗೌರವಿಸಿದರು. ಸೀತಾ ಭಟ್ ಪ್ರಾರ್ಥಿಸಿದರು. ಸ್ವರ್ಣಲತಾ ಹೆಗ್ಡೆ ಸ್ವಾಗತಿಸಿದರು. ಶಾರದಾ ಅರಸ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ವರಮಹಾಲಕ್ಷ್ಮೀ ಪೂಜೆಯ ಮಹಾಪೂಜೆ ನಡೆಯತು.