ವೀರಶೈವ ಎಂಬುದು ಒಂದು ಧರ್ಮ: ಕೆ.ಷಡಕ್ಷರಿ

ಸಂಜೆವಾಣಿ ನ್ಯೂಸ್
ಮೈಸೂರು:ನ.27:-
ಡಾ.ಶಿವರಾತ್ರಿ ರಾಜೇಂದ್ರ ವಿದ್ಯಾರ್ಥಿನಿಲಯದಲ್ಲಿ ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಅವರ ಶತೋತ್ತರ ದಶಮಾನೋತ್ಸವ (110ನೇ ಜಯಂತಿ) ಹಾಗೂ ಡಾ.ಶಿವರಾತ್ರಿ ರಾಜೇಂದ್ರ ವಿದ್ಯಾರ್ಥಿನಿಲಯದ ವಿಸ್ತುತ ಕಟ್ಟಡ ಭೂಮಿ ಪೂಜೆಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು.


ನಗರದ ಗಂಗೋತ್ರಿ ಬಡಾವಣೆಯಲ್ಲಿರುವ ವಿದ್ಯಾರ್ಥಿನಿಲಯದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು, ತಿಪಟೂರು ವಿಧಾನಸಭಾ ಶಾಸಕ ಕೆ.ಷಡಕ್ಷರಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಬದುಕಿನಲ್ಲಿ ಒಬ್ಬ ರಾಜಕಾರಣಿಯಾಗಿರುವುದಕ್ಕಿಂತ, ಒಬ್ಬ ಸಹಕಾರಿಯಾಗಿ ತೃಪ್ತಿ ಲಭಿಸಿದೆ ಎಂದು ಸಂತಸ ವ್ತಕ್ತಪಡಿಸಿದರು.
ವೀರಶೈವರಾಗಿ ಜನಿಸಿರುವುದು ಪುಣ್ಯವೆಂದೆನಿಸುತ್ತದೆ. ವೀರಶೈವ ಒಂದು ಧರ್ಮ ಎಂಬುದು ನನ್ನ ಭಾವನೆ. ಲಿಂಗಾಯತ ಎಂಬುದನ್ನು ಜಾತಿಯನ್ನಾಗಿಸಲಾಗಿದೆ. ಜಾತಿ ಬದಲಾಗಿ ಧರ್ಮವನ್ನಾಗಿ ಆಚರಿಸಿದರೆ, ಯಶಸ್ಸು ಸಾಧ್ಯವಿದೆ ಎಂದು ಅಭಿಪ್ರಾಯಿಸಿದರು.


ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಕೊಡುಗೆ ಸಮಾಜಕ್ಕೆ ಹಾಗೂ ಮೈಸೂರು ಭಾಗಕ್ಕೆ ಅಪಾರವಾದದ್ದು, ಜೆಎಸ್‍ಎಸ್ ಮಠ ಸಮಾಜದಲ್ಲಿ ಅಶಕ್ತರಿಗೆ, ವಿದ್ಯೆಯಿಂದ ವಂಚಿತರಾದವರನ್ನು ಮೇಲುತ್ತುವ ಕೆಲಸ ಮಾಡುತ್ತಾ ಬಂದಿರುವುದು ಶ್ರೇಷ್ಠ ಕೆಲಸ ಮಾಡುತ್ತಿದೆ. ಅವತ್ತಿನ ಕಾಲದಲ್ಲಿ ಅನ್ನದಾಸೋಹಗಳನ್ನು ನಡೆಸಿಕೊಂಡು ಬಂದು, ವಿದ್ಯಾಲಯಗಳನ್ನು ನಿರ್ಮಾಣ ಮಾಡಿ ಸಮಾಜವನ್ನು ಸಧೃಡವಾಗಿ ನಿರ್ಮಾಣ ಮಾಡುವ ಕೆಲಸ ಮಾಡುತ್ತಾ ಬಂದಿದೆ. ಈ ನಾಡಿನಲ್ಲಿ ಮಠಮಾನ್ಯಗಳು ಉದ್ಭವಿಸದಿದ್ದರೆ, ಇವತ್ತು ಈ ಸಮಾಜ, ಶಿಕ್ಷಣದಿಂದ ವಂಚಿತರಾಗಬೇಕಾಗಿತ್ತು ಎಂದು ತಿಳಿಸಿದರು.
ಮುದ್ದುರಾಮ ಪ್ರತಿಷ್ಠಾನ ಅಧ್ಯಕ್ಷ ಸಾಹಿತಿ ಪೆÇ್ರ.ಕೆ.ಸಿ.ಶಿವಪ್ಪ ಮಾತನಾಡಿ, ಯಾರನ್ನಾದರೂ ಪ್ರೀತಿಸಬೇಕಾದರೆ, ಆರಾಧಿಸಬೇಕಾದರೆ ಚೈತನ್ಯಸಧೃಷರಾಗಿರಬೇಕು. ಆಗ ಮಾತ್ರ ಅವರು ಇತರರಿಗೆ ಮಾದರಿಯಾಗುತ್ತಾರೆ. ಭವಿಷ್ಯದ ದಿನಗಳಲ್ಲಿ ಅವರ ಬದುಕು ದೃವತಾರೆಯಂತೆ ದಾರಿದೀಪವಾಗುತ್ತದೆ. ಈ ನಿಟ್ಟಿನಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಈ ಭಾವಗಳಿಂದ ಮುಂದೆ ನಿಲ್ಲುತ್ತಾರೆ. ಭಾರತೀಯ ಅನುಕಂಪನೀಯ ಬೀಜಾಂಕುರ ಮಾಡಬೇಕಿದೆ. ಅವರ ಅನುಪಮ ಮಾರ್ಗದರ್ಶನದಿಂದ ನನ್ನಂತವರ ಬದುಕು ಸಾರ್ಥಕವಾಗಿದೆ ಎಂದು ಭಕ್ತಿಭಾವದಿಂದ ನುಡಿದರು.


ಕನ್ನಡ ಪುಸ್ತಕ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಎನ್ ನಂದೀಶ್ ಹಂಚೆ, ಗುಂಡ್ಲುಪೇಟೆ ಮಾಜಿ ಶಾಸಕ ನಿರಂಜನ್ ಕುಮಾರ್, ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಲ್.ರೇವಣ್ಣಸಿದ್ದಯ್ಯ(ನಿವೃತ್ತ ಐಪಿಎಸ್), ಉಪಾಧ್ಯಕ್ಷ ನಂಜುಂಡಪ್ಪ, ನಿರ್ದೇಶಕ ಅಡಗೂರು ಚನ್ನಬಸಪ್ಪ, ಕಾನೂನು ಸಲಹೆಗಾರ ಪರಮಶಿವಯ್ಯ, ಕಾರ್ಯದರ್ಶಿ ಸ್ವಾಮಿ, ಸುಬ್ಬಯ್ಯ ಮತ್ತಿತರರಿದ್ದರು.