
ಸಂಜೆವಾಣಿ ವಾರ್ತೆ
ಬಳ್ಳಾರಿ, ನ.01: ಸರ್ವಶ್ರೇಷ್ಠ ಮಾತೃಭಾಷೆಯಾದ ಕನ್ನಡವು ಜೀವ ಚೈತನ್ಯದಂತೆ ಕ್ಷಾತ್ರ ತೇಜಸ್ಸನ್ನು ಹೊಂದಿದ್ದು, ಕನ್ನಡದ ಮನಸ್ಸುಗಳ ಮೂಲಕ ಅಸ್ಮಿತೆಯನ್ನು ಜೀವಾಳವಾಗಿಸಿಕೊಂಡಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಉಪಾಧ್ಯಕ್ಷರಾದ ಸಿದ್ಧರಾಮ ಕಲ್ಮಠ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು ಮಾತನಾಡಿ, ರಾಜ್ಯದಲ್ಲಿ ಪರಭಾಷಿಗರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ರಾಜಧಾನಿಯಲ್ಲಿ ಉತ್ತರ ಭಾರತದವರ ವಲಸೆಯಿಂದ ಮೂಲಕ ಕನ್ನಡಿಗರಿಗೆ ಧಕ್ಕೆಯಾಗಿದೆ. ನಮ್ಮ ಮಾತೃಭಾಷೆಯನ್ನು ಉಳಿಸಲು, ಬೆಳೆಸಲು ನಾವೆಲ್ಲ ಕೇವಲ ನವಂಬರ್ ತಿಂಗಳ ಕನ್ನಡಿಗರಾಗದೆ ನಮ್ಮ ಉಸಿರಿರುವರೆಗೆ ಭಾಷಾಭಿಮಾನವನ್ನು ಮೆರೆಯಬೇಕು ಎಂದು ಕರೆ ನೀಡಿದರು.
ವಿವಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಸಂತೋಷ್ ಜಿ ಕೆ ಅತಿಥಿಗಳನ್ನು ಸ್ವಾಗತಿಸಿದರು.
ವಿವಿಯ ಕುಲಸಚಿವರಾದ ಸಿ ನಾಗರಾಜು, ಪರೀಕ್ಷಾಂಗ ಕುಲಸಚಿವರಾದ ಪ್ರೊ ಎನ್ ಎಂ ಸಾಲಿ, ಕಲಾ ನಿಕಾಯದ ಡೀನರಾದ ಪ್ರೊ ರಾಬರ್ಟ್ ಜೋಸ್, ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗದ ಮುಖ್ಯಸ್ಥರಾದ ಪ್ರೊ ಶಾಂತನಾಯ್ಕ್ ಎನ್ ವೇದಿಕೆಯಲ್ಲಿದ್ದರು.
ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮೊದಲು ಗಣ್ಯರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ನಂತರ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರುಗಳು ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳನ್ನು ಹಾಡಿದರು.
ಎಲ್ಲ ನಿಕಾಯಗಳು ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರುಗಳು, ವಿದ್ಯಾರ್ಥಿಗಳು ಹಾಜರಿದ್ದರು.
…

































