
ಸಂಜೆವಾಣಿ ನ್ಯೂಸ್
ಮೈಸೂರು: ಮೇ.25:- ಪ್ರಸಕ್ತ ಸಾಲಿನ ವಿಶ್ವ ಯೋಗ ದಿನದಂದು ಬರೋಬ್ಬರಿ 1.20 ಲಕ್ಷ ಜನರನ್ನು ಸೇರಿಸಿ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿಸಲು ಸಂಕಲ್ಪ ಮಾಡಲಾಯಿತು..
ಯೋಗ ಫೆಡರೇಷನ್ ಆಫ್ ಮೈಸೂರು ವತಿಯಿಂದ ನಗರದ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಂಕಲ್ಪ ದಿನ-2026' ಕಾರ್ಯಕ್ರಮದಲ್ಲಿ ನೂರಾರು ಯೋಗಪಟುಗಳು ಹಾಗೂ ಯೋಗ ಶಿಕ್ಷಕರು ಪ್ರಮಾಣ ವಚನ ಸ್ವೀಕರಿಸಿದರು. ಮೈಸೂರು ಜಾಗತಿಕ ಯೋಗ ನಗರಿ’: ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿನಿಧಿ ದಿನಪತ್ರಿಕೆ ಪ್ರಧಾನ ಸಂಪಾದಕ ಸಿ.ಕೆ.ಮಹೇಂದ್ರ, ಮೈಸೂರು ಜಾಗತಿಕ ಮಟ್ಟದಲ್ಲಿ ಯೋಗ ನಗರವಾಗಿ ಪ್ರಸಿದ್ಧಿ ಗಳಿಸಿದೆ. ವಿಶ್ವ ಯೋಗ ದಿನ ಪರಿಕಲ್ಪನೆ ಘೋಷಣೆಯಾದ ವರ್ಷದಿಂದಲೂ ದೊಡ್ಡ ಮಟ್ಟದಲ್ಲಿ ಯೋಗ ಕಾರ್ಯಕ್ರಮಗಳನ್ನು ಸಂಘಟಿಸಿ ದಾಖಲೆ ನಿರ್ಮಿಸಿದೆ'' ಎಂದು ಸ್ಮರಿಸಿದರು. ಮೈಸೂರಿನಲ್ಲಿ ಈಗ ಬೆಳಗಿನ ಜಾವದಲ್ಲಿ ಯೋಗಪಟುಗಳು ಕಾಣಸಿಗುತ್ತಾರೆ. ಮನೆ, ಉದ್ಯಾನ, ಸಂಘ-ಸಂಸ್ಥೆಗಳಲ್ಲಿ ಯೋಗಾಭ್ಯಾಸಕ್ಕೆ ಬರುವ ಅಥವಾ ಹೋಗುವ ಜನ ರಸ್ತೆಗಳಲ್ಲಿ ಕಾಣಿಸುತ್ತಾರೆ. ಅಂದರೆ, ಜನರಿಗೆ ಆರೋಗ್ಯ ಮತ್ತು ಯೋಗದ ಮಹತ್ವ ಅರಿವಾಗಿದೆ. ಇದನ್ನು ನಾವು ಇನ್ನಷ್ಟು ವಿಸ್ತರಿಸೋಣ. ಮುಂಬರುವ ಯೋಗ ದಿನವನ್ನು ಯಶಸ್ವಿಗೊಳಿಸೋಣ. ಇದಕ್ಕೆ ಎಲ್ಲ ಯೋಗಪಟುಗಳು, ಯೋಗ ಶಿಕ್ಷಕರು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ನಾಗರಿಕರು ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
ಸಾಮೂಹಿಕ ಯೋಗಾಭ್ಯಾಸ: ಮೈಸೂರು ಯೋಗ ಒಕ್ಕೂಟ, ಜಿಎಸ್‍ಎಸ್ ಯೋಗ, ಭಾರತ್ ಸ್ವಾಭಿಮಾನ್ ಟ್ರಸ್ಟ್, ಮೈಸೂರು ಯೋಗ ಅಸೋಸಿಯೇಷನ್, ಯೋಗ ಸ್ಪೋಟ್ರ್ಸ್ ಫೌಂಡೇಶನ್, ಎಸ್‍ಪಿವೈಎಸ್‍ಎಸ್ ಮುಂತಾದ ಸಂಘಟನೆಗಳ ಸದಸ್ಯರು ಯೋಗ ಶಿಷ್ಟಾಚಾರದ ಅನ್ವಯ ಯೋಗಾಭ್ಯಾಸ ಮಾಡಿದರು.
ಜಿಎಸ್‍ಎಸ್ ಯೋಗ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್, ರಂಗನಾಥ್, ಸರಳ, ವಿವಿಧ ಸಂಘಟನೆಗಳ ಶಶಿಕುಮಾರ್, ದೇವರಾಜು, ಜಲೇಂದ್ರ, ಬಿ.ಪಿ.ಮೂರ್ತಿ, ಶ್ರೀನಿವಾಸ ನಾಯ್ಡು, ಕಿರಣ್ ಮುಂತಾದವರು ಪಾಲ್ಗೊಂಡಿದ್ದರು.






















