ವಿಶ್ವ ಬಾಲಕಾರ್ಮಿಕ ವಿರೋಧಿ  ದಿನಾಚರಣೆ ಜಾಗೃತಿ ಜಾಥಾಬಡತನವೇ ಮಕ್ಕಳ ದುಡಿಮೆಗೆ ಕಾರಣ: ಹೊಸಮನಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,12-
ವಿಶ್ವ ಬಾಲಕಾರ್ಮಿಕ ವಿರೋಧಿ  ದಿನಾಚರಣೆ ಅಂಗವಾಗಿ  ಬಾಲ ಕಾರ್ಮಿಕ ಪದ್ದತಿ ಹೋಗಲಾಡಿಸುವ ಕುರಿತು ನಗರದಲ್ಲಿಂದು ಜಿಲ್ಲಾಡಳಿತ, ಕಾರ್ಮಿಕ ಇಲಾಖೆಯಿಂದ   ಜಾಗೃತಿ ಮೂಡಿಸುವ ಜಾಥಾ ಹಮ್ಮಿಕೊಂಡಿತ್ತು.
ನಗರದ ಜಿಲ್ಲಾಧಿಕಾರಿಗಳಿಂದ ಆರಂಭಗೊಂಡ ಜಾಥಾಗೆ ಹಿರಿಯ ಸಿವಿಲ್ ನ್ಯಾಯಾಧೀಶ  ರಾಜೇಶ್ ಎನ್  ಹೊಸಮನಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ ಅವರು ಚಾಲನೆ ನೀಡಿದರು.
ಜಾಥಾವು ಇಲ್ಲಿಂದ ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ತೇರು ಬೀದಿ, ಗಬಿಯಪ್ಪ ಸರ್ಕಲ್ ಮೂಲಕ‌ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ಬಂದು ತಲುಪಿತು.
ಮಕ್ಕಳಿಗೆ ಶಿಕ್ಷಣ ನೀಡಿ ದುಡಿಮೆಯಿಂದ ಮುಕ್ತಿಗೊಳಿಸಿ,  ಮಕ್ಕಳನ್ನು ಶಾಲೆಗೆ ಕಳಿಸಿ ಕೆಲಸಕ್ಕಲ್ಲ, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ, ದೇಶದ ಸರ್ವತೋಮುಖ ಸುಧಾರಣೆ, ದುಡಿಸಬೇಕೆ ಮಕ್ಕಳನ್ನು ಅವಮಾನಿಸಬೇಕೆ ದೇಶವನ್ನು, ಬಾಲಕಾರ್ಮಿಕರ ನೇಮಕ ಅಪರಾದ 20 ಸಾವಿರ ರೂ ದಂಡ 6 ತಿಂಗಳ ಜೈಲು ಎನ್ನುವ ಬರಹಗಳ ಪ್ಲೇ ಕಾರ್ಡ್ ಹಿಡಿದ ಶಾಲಾ ಮಕ್ಕಳು ಜಾಥಾದಲ್ಲಿ ಸಾಗಿದರು.
ಈ ವೇಳೆ ಸಂಜೆವಾಣಿಯೊಂದಿಗೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ ಅವರು, ಬಾಲಕಾರ್ಮಿಕ ಪದ್ದತಿ ಅನಿಷ್ಟವಾದುದು. ಇದರ ವಿರುದ್ದ ಇಂದು ಪ್ರತಿ ಶಾಲೆಯಲ್ಲಿ ಪ್ರತಿಜ್ಞಾವಿಧಿ ಭೋದಿಸಿದೆ. ಬಾಲ ಕಾರ್ಮಿಕ ಪದ್ದತಿ‌ ನಿರ್ಮೂಲನೆಗೆ ಜಿಲ್ಲಾಡಳಿತ ಅರಿವು ಮೂಡಿಸುವ, ದಾಳಿ ನಡೆಸಿ ದಂಡ ವಿಧಿಸುವ ಕಾರ್ಯ ಆಗಿದೆಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ  ರಾಜೇಶ್ ಎನ್. ಹೊಸಮನಿ ಅವರು ಮಾತನಾಡಿ, ಬಡತನದಿಂದಾಗಿ ವಿಶ್ವದಲ್ಲಿ 16 ಕೋಟಿ, ಭಾರತದಲ್ಲಿ ಒಂದು ಕೋಟಿ ಬಾಲ ಕಾರ್ಮಿಕ ಮಕ್ಕಳು ಇದ್ದಾರೆ.‌
ಈ ಪದ್ದತಿಯನ್ನು ನಿರ್ಮೂಲನೆ ಮಾಡಲು ಕೇವಲ ಸರ್ಕಾರದ ಕಾಯ್ದೆ ಕಾನೂನುಗಳಿಂದ ಮಾತ್ರ ಸಾಧ್ಯ ಇಲ್ಲ. ಪ್ರತಿಯೊಬ್ಬರು, ಸಂಘ ಸಂಸ್ಥೆಗಳು ಮಕ್ಕಳನ್ನು ದುಡಿಸಿಕೊಳ್ಳುವುದನ್ನು ಕೈ ಬಿಡಬೇಕು. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಬಡತನ‌ ಹೋಗಲಾಡಿಸುವುದರೊಂದಿಗೆ ಈ ಪದ್ದತಿಯ ನಿರ್ಮೂಲನೆಗೆ ಮುಂದಾಗಬೇಕು ಎಂದರು.
ನಂತರ ನಗರದ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನತೆಗೆ ಬಾಲ‌ ಕಾರ್ಮಿಕ ಪದ್ದತಿ ವಿರೋದದ ಬಗ್ಗೆ ಪ್ರತಿಜ್ಞಾವಿಧಿ ಭೋದಿಸಲಾಯ್ತು.
ಇಲ್ಲಿ ಎಎಸ್ಪಿ ನವೀನ್ ಕುಮಾರ್ ಮಾತನಾಡಿ ಬಾಲ ಕಾರ್ಮಿಕರು ಕಂಡ ತಕ್ಷಣ ನೀವು 1098 ಪೋನ್ ಮಾಡಿ ಸಕ್ಷಮ ಪ್ರಾಧಿಕಾರದವರು ಬಂದು ಕ್ರಮ ತೆಗೆದುಕೊಳ್ಳುತ್ತಾರೆ. ಮಕ್ಕಳು ಓದಬೇಕೆ ಹೊರತು, ದುಡಿಮೆಗೆ ಅಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ಮ, ಕ್ಕಳ ರಕ್ಷಣಾ ಸಮಿತಿ, ವಕೀಲರ ಸಂಘ , ಪೊಲೀಸ್ ಇತರೇ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.