ಲಿವರ್ ಪೂಲ್ (ಇಂಗ್ಲೆಂಡ್), ಸೆ.೧೪: ಭಾರತದ ಜೈಸ್ಮಿನ್ ಲ್ಯಾಂಬೋರಿಯಾ ೨೦೨೨೫ ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಶನಿವಾರ ತಡರಾತ್ರಿ ನಡೆದ ಮಹಿಳೆಯರ ೫೭ ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪೋಲೆಂಡ್ ನ ಜೂಲಿಯಾ ಸೆರೆಮೆಟಾ ಅವರನ್ನು ೪-೧ ಅಂಕಗಳಿಂದ ಸೋಲಿಸಿದ ಜೈಸ್ಮಿನ್ ಚಿನ್ನದ ಪದಕ ಜಯಿಸಿದರು. ಪಂದ್ಯದ ಆರಂಭದಿಂದಲೂ ಹಿನ್ನಡೆ ಅನುಭವಿಸಿದ್ದ ಜೈಸ್ಮಿನ್, ಕೊನೆಯ ಕ್ಷಣದಲ್ಲಿ ಪುಟಿದೇಳುವ ಮೂಲಕ ಸಮಗ್ರ ಗೆಲುವನ್ನು ದಾಖಲಿಸುವಲ್ಲಿ ಯಶಸ್ವಿಯಾದರು.
ಚಿನ್ನ ಗೆದ್ದ ಬಳಿಕ ಪ್ರತಿಕ್ರಿಯಿಸಿದ ಜೈಸ್ಮಿನ್, “ಈ ಭಾವನೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ವಿಶ್ವ ಚಾಂಪಿಯನ್ ಆಗಿರುವುದು ನನಗೆ ತುಂಬಾ ಹರ್ಷ ತಂದಿದೆ. ಪ್ಯಾರಿಸ್ ೨೦೨೪ ರಲ್ಲಿ ನನ್ನ ಆರಂಭಿಕ ನಿರ್ಗಮನದ ನಂತರ ನಾನು ದೂರ ಸರಿದಿದ್ದೆ. ನಂತರ ದೈಹಿಕವಾಗಿ ಮತ್ತು ಮಾನಸಿಕವಾಗಿ ನನ್ನ ಕಾರ್ಯತಂತ್ರಗಳನ್ನು ಸುಧಾರಿಸಿಕೊಂಡೆ. ಇದು ಒಂದು ವರ್ಷದ ಕಠಿಣ ಪರಿಶ್ರಮದ ಫಲಿತಾಂಶವಾಗಿದೆ,” ಎಂದು ಹೇಳಿದರು.
ನೂಪುರ್, ಪೂಜಾ ರಾಣಿ ವಿಶ್ವ ಪದಕ
ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ ಇತರ ಭಾರತೀಯ ಸ್ಪರ್ಧಿಗಳಾದ ಪೂಜಾ ರಾಣಿ (೮೦ ಕೆ.ಜಿ) ನೂಪುರ್ (೮೦+ ಕೆ.ಜಿ) ಕಂಚಿನ ಪದಕ ಗೆದ್ದಿದ್ದಾರೆ.
೪೮ ಕೆ.ಜಿ ವಿಭಾಗದಲ್ಲಿ ಭಾರತದ ಮೀನಾಕ್ಷಿ ಅವರು ಕಜಕಿಸ್ತಾನದ ನಜೀಮ್ ಕೈಜೈಬೇ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ ೧೪ ರಂದು ಫೈನಲ್ ಪಂದ್ಯ ನಡೆಯಲಿದ್ದು, ಭಾರತ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದೆ.























