ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವನ್ನಾಗಿಸಲು 500 ಗಿಡ ನೆಡುವ ಕಾರ್ಯಕ್ಕೆ ಶಾಸಕರಿಂದ ಚಾಲನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.07-
ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಚಾಮರಾಜನಗರ ನಗರಸಭಾ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ 500 ಗಿಡಗಳನ್ನು ನೆಡುವ ಕಾರ್ಯಕ್ಕೆ ಇಂದು ಎಂ.ಎಸ್.ಐ.ಎಲ್. ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.

ನಗರದ ಸೋಮವಾರಪೇಟೆಯ ಸ್ವಾಗತ ಕಮಾನಿನ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಅರಣ್ಯ ಇಲಾಖೆ, ಪರಿಸರ ಇಲಾಖೆ ಹಾಗೂ ನಗರದ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಚೂಡಾ ಅಧ್ಯಕ್ಷÀ ಮಹಮ್ಮದ್ ಅಸ್ಗರ್ ಮುನ್ನಾ ಅವರು ಗಿಡ ನೆಟ್ಟು ನೀರೆರೆದರು.

ವಿಶ್ವ ಪರಿಸರ ದಿನದ ಉದ್ದೇಶ ಕುರಿತು ಮಾತನಾಡಿದ ಎಂ.ಎಸ್.ಐ.ಎಲ್. ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರ ಪಟ್ಟಣದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಸ್ಯ ಸಮೃದ್ಧಿ ಹೆಚ್ಚಿಸಬೇಕಿದೆ. ಮರ ಗಿಡಗಳು ಗಾಳಿಯಲ್ಲಿರುವ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಉಸಿರಾಡಲು ನಮಗೆ ಸ್ವಚ್ಚಗಾಳಿ ನೀಡುತ್ತವೆ. ಯಾರೇ ಆದರೂ ಒಂದು ಗಿಡಕ್ಕೆ ಹಾನಿ ಮಾಡಿದರೆ ಎರಡು ಗಿಡ ನೆಡಬೇಕು. ಸಸಿ ನೆಡುವುದು ಮಾತ್ರವಲ್ಲ. ಅದನ್ನು ನೀರೆರೆದು ಕಾಪಾಡುವುದು ಅತೀ ಮುಖ್ಯವಾಗಿದೆ ಎಂದರು.

ವಿಶ್ವ ಪರಿಸರ ದಿನದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ವಿಶ್ವ ಪರಿಸರ ದಿನವನ್ನು ವೇದಿಕೆ ಕಾರ್ಯಕ್ರಮ ಆಯೋಜನೆ, ಜಾಗೃತಿಗಾಗಿ ಮ್ಯಾರಥಾನ್, ದಾಖಲೀಕರಣಕ್ಕಾಗಿ ಫೋಟೋ ತೆಗೆಸಿಕೊಳ್ಳುವಂತಹ ಸಾಂಕೇತಿಕ ಕಾರ್ಯಕ್ರಮಗಳಿಗಿಂತ ವಿಭಿನ್ನವಾಗಿ ಹಾಗೂ ಬಹಳ ಅರ್ಥಪೂರ್ಣವನ್ನಾಗಿಸಲು 4 ಗಿಡ ನೆಡುವ ಬದಲು ಈ ಬಾರಿ ವಿಶೇಷವಾಗಿ ಪಟ್ಟಣದಲ್ಲಿ 500 ಸಸಿಗಳನ್ನು ನೆಡಲಾಗುತ್ತಿದೆ. ಬೆಂಗಳೂರು, ಮೈಸೂರಿನಲ್ಲಿ ನೂರಾರು ವರ್ಷಗಳ ಹಿಂದೆ ನೆಟ್ಟಿದ್ದ ಸಸಿಗಳು ಇಂದು ಹೆಮ್ಮರವಾಗಿ ಬೆಳೆದಿವೆ.

ಚಾಮರಾಜನಗರ ಪಟ್ಟಣದಲ್ಲಿಯೂ ಅಂತಹ ಪರಿಸರ ಸಮೃದ್ಧಿ ವಾತಾವರಣ ನಿರ್ಮಾಣವಾಗಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ರಸ್ತೆಬದಿಯಲ್ಲಿ ಮರಗಿಡಗಳನ್ನು ಬೆಳೆಸುವುದರಿಂದ ಸಾಕಷ್ಟು ಉಪಯೋಗಗಳಿವೆ. ಜನರಿಗೆ ನೆರಳು ದೊರೆಯುತ್ತದೆ. ನಗರದಲ್ಲಿ ಶುದ್ಧಗಾಳಿ ಒದಗಿಸುವ ಅಮ್ಲಜನಕದ ಮಟ್ಟ ಹೆಚ್ಚಾಗಲಿದೆ. ಮಾಲಿನ್ಯ ಕಡಿಮೆಯಾಗಲಿದೆ. ಅಂತರ್ಜಲ ವೃದ್ಧಿಸಲಿದೆ. ಮುಂದಿನ 20-25 ವರ್ಷಗಳಲ್ಲಿ ಎಲ್ಲೆಡೆ ಹಸಿರಿನ ಸುಂದರ ಪರಿಸರ ಕಣ್ತುಂಬಲಿದೆ. ಜನರಿಗೆ, ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಬೇಕು. ಬರೀ ಗಿಡ ನೆಡುವುದಲ್ಲ. ಅದನ್ನು ಒಂದು ವರ್ಷಗಳವರೆಗೆ ನೀರೆರೆದು ಪೋಷಿಸಬೇಕು. 500 ಗಿಡಗಳಲ್ಲಿ 480 ರಿಂದ 490 ಮರಗಳನ್ನಾಗಿ ಬೆಳೆಸುವ ಮಹತ್ವದ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ ಹಲವಾರು ಸಂಘ ಸಂಸ್ಥೆಗಳು ಜಿಲ್ಲಾಡಳಿತ, ನಗರಸಭೆಯೊಂದಿಗೆ ಕೈಜೋಡಿಸಿವೆ ಎಂದು ತಿಳಿಸಿದರು.

ಒಟ್ಟಾರೆ ನಾವು ಚೆಲುವ ಚಾಮರಾಜನಗರ, ಸ್ವಚ್ಚ ಚಾಮರಾಜನಗರದ ಪರಿಸರ ಸಂರಕ್ಷಣೆಗೆ ಉತ್ತಮ ಹೆಜ್ಜೆಯನ್ನಿಟ್ಟಿದ್ದೇವೆ.
ಈ ಕಾರ್ಯಕ್ರಮ ಇತರೆಡೆ ಮಾದರಿಯಾಗಬೇಕು ಎಂದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪಟ್ಟಣದಲ್ಲಿ 15 ಸಾವಿರ ಸಸಿಗಳನ್ನು ಬೆಳೆಸುವುದರ ಮೂಲಕ ಪರಿಸರ ಸಂರಕ್ಷಣೆಗೆ ಈ ಸಾಲಿನ ರಾಜ್ಯಪ್ರಶಸ್ತಿ ಪಡೆದಿರುವ ನಗರದ ಪರಿಸರಪ್ರೇಮಿ ಸಿ.ಎಂ. ವೆಂಕಟೇಶ್ ಅವರನ್ನು ಅಭಿನಂದಿಸಿದರು.
ಚೂಡಾ ಅಧ್ಯಕ್ಷ ಮಹಮ್ಮದ್‍ಅಸ್ಗರ್ ಮುನ್ನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ನಗರಸಭೆ ಉಪಾಧ್ಯಕ್ಷ ಮಮತ, ನಗರಸಭೆ ಸದಸ್ಯ ನೀಲಮ್ಮ ಅವರು ಕಾರ್ಯಕ್ರಮದ ಸದುದ್ದೇಶ ಕುರಿತು ಮಾತನಾಡಿ ವಿಶ್ವ ಪರಿಸರ ದಿನಾಚರಣೆ ಶುಭಾಷಯ ತಿಳಿಸಿದರು.

ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್, ನಗರಸಭೆಯ ಪರಿಸರ ಅಭಿಯಂತರÀ ರೂಪ, ಸಮುದಾಯ ಸಂಘಟನಾಧಿಕಾರಿ ವೆಂಕಟ್ ನಾಯಕ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಸುಷ್ಮಾ, ಪುಷ್ಪಾ, ನಾರಾಯಣ್, ಸಂತೋಷ್, ಅರಣ್ಯ ಇಲಾಖೆಯ ಅಧಿಕಾರಿಗಳು, ಪರಿಸರ ಅಧಿಕಾರಿಗಳು, ಇತರರು ಇದೇ ಸಂದರ್ಭದಲ್ಲಿ ಇದ್ದರು.