
ಮಂಗಳೂರು, ಎ.೧೮: ಕೊಂಕಣಿ ಸಾಹಿತ್ಯ-ಕಲೆ-ಸಂಸ್ಕೃತಿ ಸಂಭ್ರಮಿಸುವ ಎರಡು ದಿನಗಳ ಉತ್ಸವ ವಿಶ್ವಕೊಂಕಣಿ ಸಮಾರೋಪ ಸಮಾರಂಭವು ವಿಶ್ವ ಕೊಂಕಣಿ ಕೇಂದ್ರದಲ್ಲಿ ರವಿವಾರ ಮುಕ್ತಾಯಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂತಹ ಭವ್ಯ ಸಭಾಗೃಹದಲ್ಲಿ ಜರುಗುತ್ತಿರುವ ವಿವಿಧ ಸಾಹಿತ್ಯಕ, ಸಾಂಸ್ಕೃತಿಕ, ಕಲಾ, ಶೈಕ್ಷಣಿಕ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಸಭೆಯ ವಿಶೇಷ ಆಕರ್ಷಿತರಾದ ಹಿರಿಯ ವಕೀಲ ಕೆ ಜಗದೀಶ್ ಕಾಮತ್ ಇವರು ’ಭಾರತದ ಸಂವಿಧಾನದಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಲಭ್ಯವಿರುವ ಅವಕಾಶಗಳು’ ಮತ್ತು ಅದರ ಪೂರ್ಣ ಸದುಪಯೋಗ ಮಾಡದಿರುವ ಬಗ್ಗೆ ಮಾಹಿತಿ ನೀಡಿದರು. ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷರಾದ ಸಿಎ ನಂದಗೋಪಾಲ್ ಶೆಣೈ ಅವರು ಮುಖ್ಯ ಅತಿಥಿ ಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕೇಂದ್ರದ ಕೋಶಾಧಿಕಾರಿ ಬಿ ಆರ್ ಭಟ್, ಉಪಾಧ್ಯಕ್ಷ ಡಾ.ಕಿರಣ ಬುಡ್ಕುಳೆ, ರಮೇಶ್ ಡಿ ನಾಯಕ, ಉಪಸ್ಥಿತರಿದ್ದರು. ಸಾಹಿತ್ಯ ಸಮಾರೋಹಕ್ಕೆ ಗೋವಾ ವಿಶ್ವ ವಿದ್ಯಾನಿಲಯ ಹಾಗೂ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು, ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಎರಡನೇ ದಿನದ ಪೂರ್ವಾಹ್ನ ಮೂರು ಜನಪದ ಗೋಷ್ಠಿಗಳ ಉದ್ಘಾಟನೆಯನ್ನು ಜನಪದ ಚಿಂತಕ ಹಾಗೂ ಗೋವಾ ವಿಶ್ವವಿದ್ಯಾನಿಲಯದ ವೈಸ್-ಡೀನ್ ಡಾ.ಪ್ರಕಾಶ್ ಪರಿಯೆನಕರ್ ನೆರವೇರಿಸಿದರು.
ಮಹಾದಾನಿ ಹಾಗೂ ಶತ ಕೊಂಕಣಿ ಪುಸ್ತಕ ಪ್ರಕಟಣೆ ಯೋಜನೆಯ ಪ್ರವರ್ತಕ ಮೈಕೆಲ್ ಡಿ ಸೋಜ ಹಾಗೂ ವರ್ಧನಿ ಪ್ರತಿಷ್ಠಾನದ ನಿರ್ದೇಶಕ ಉಷಾ ಎನ್ ಶೆಣೈ ಇವರು ಭಾಗವಹಿಸಿ ಶುಭ ಹಾರೈಸಿದರು
ಮುಂದೆ ಪ್ರಸಿದ್ಧ ಕಥೆಗಾರ ವಿವೇಕಾನಂದ ಕಾಮತ್ ಅಧ್ಯಕ್ಷತೆಯಲ್ಲಿ ಕೊಂಕಣಿ ನ್ಯಾನೊ ಕಥೆಗಳು ಕಥಾ ಸಮಯ ನಡೆಸಲಾಯಿತು. ಜಯಶ್ರೀ ಶೆಣೈ, ವಂದನಾ ನಾಯಕ, ಕಸ್ತೂರಿ ಪೈ, ಶಕುಂತಲಾ ಆರ್ ಕಿಣಿ, ಬಸ್ತಿ ಶೋಭಾ ಶೆಣೈ ನ್ಯಾನೊ ಕಥಾ ವಾಚನ ನಡೆಸಿಕೊಟ್ಟರು. ಪ್ರಸಿದ್ಧ ಯಕ್ಷಗಾನ ಕಲಾವಿದರು ಹಾಗೂ ವಿಮರ್ಶಕರು ಡಾ.ಪ್ರಭಾಕರ ಜೋಶಿಯವರ ಮಾರ್ಗದರ್ಶನದಲ್ಲಿ, ಯಕ್ಷಗಾನ ಮತ್ತು ಕೊಂಕಣಿಗರು ವಿಚಾರ ಗೋಷ್ಠಿಯಲ್ಲಿ ಅರ್ಗೋಡು ಮೋಹನದಾಸ್ ಶೆಣೈ, ಎಂ ಆರ ಕಾಮತ್ ಶಾಂತಾರಾಮ ಕುಡ್ವ ಇವರು ವಿಷಯ ಮಂಡಿಸಿದರು.
ಇದನ್ನೂ ಓದಿ ಬಾಲಕರು ವಾಹನ ಚಲಾಯಿಸಿದ ಪ್ರಕರಣ| ಮಾಲಕರಿಗೆ ತಲಾ ೨೫,೦೦೦ ರೂ. ದಂಡ ವಿಧಿಸಿದ ನ್ಯಾಯಾಲಯ
ಶಕುಂತಲಾ ಕಿಣಿ ಇವರ ಅಧ್ಯಕ್ಷತೆಯಲ್ಲಿ ನಡೆದ ಜನಪದ ಹಾಡುಗಳ ಗಾಯನದಲ್ಲಿ. ಮರೋಳಿ ಸಬಿತಾ ಕಾಮತ್, ಜೂಲಿಯೆಟ್ ಫೆರ್ನಾಂಡಿಸ್, ಡಾ. ವಿಜಯಲಕ್ಷ್ಮಿನಾಯಕ್, ನಾರಾಯಣ ನಾಯಕ್ ತಮ್ಮ ಸಮುದಾಯದ ಮೌಖಿಕ ಪರಂಪರೆಯ ಪದಗಳನ್ನು ಪ್ರಸ್ತುತಪಡಿಸಿದರು
ಅಪರಾಹ್ನ ಸಾಹಿತ್ಯ ಅಕಾಡೆಮಿ, ನವದೆಹಲಿ ಸಹಯೋಗದಲ್ಲಿ, ವಿಶ್ವ ಕೊಂಕಣಿ ಕೇಂದ್ರ ಮತ್ತು ಕವಿತಾ ಟ್ರಸ್ಟ್ ಆಯೋಜಿಸಿದ ಯುವ ಕೊಂಕಣಿ ಬರಹಗಾರರ ಚರ್ಚಾ ಗೋಷ್ಠಿ ಜರುಗಿತು. ಸ್ನಾನಿ ಡಿ ಸೋಜ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ವಿಲ್ಮಾಡಿ ಸೋಜ ಬಂಟ್ವಾಳ, ಲವಿತಾ ಡಿ ಸೋಜ, ಡಾ. ವೆಂಕಟೇಶ್ ನಾಯಕ್, ಗ್ಲಾನಿಶ್ ಮಾರ್ಟಿಸ್, ಶ್ವೇತಾ ಪೈ ಎಂ ಮೊದಲಾದ ಯುವ ಕೊಂಕಣಿ ಬರಹಗಾರರು ತಮ್ಮ ಕವಿತಾ ವಾಚನದ ಮೂಲಕ ಸಭಿಕರ ಮನ ಸೆಳೆದರು.





























