
ಸಂಜೆವಾಣಿ ನ್ಯೂಸ್
ಮೈಸೂರು: ಜ.02:- ಜಿಲ್ಲಾಡಳಿತ ಹಾಗೂ ಜನ ಪ್ರತಿನಿಧಿಗಳು ವಿಶ್ವಕರ್ಮ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ ಎಂದು ವಿಶ್ವಕರ್ಮ ಸಮುದಾಯದ ಮುಖಂಡರು ಕಲಾಮಂದಿರದ ಮುಂಭಾಗ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ವತಿಯಿಂದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸದಿರುವುದರಿಂದ ಸಮುದಾಯದ ಮುಖಂಡರು ಬೇಸರಗೊಂಡು ಪ್ರತಿಭಟನೆ ಮಾಡಲು ಮುಂದಾದರು.
ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳುತ್ತದೆ ಎಂಬ ಉದ್ದೇಶದಿಂದ ಸಮುದಾಯದ ಮುಖಂಡರು ಕಿರುರಂಗ ಮಂದಿರಕ್ಕೆ ಆಗಮಿಸಿದರು. ಈ ವೇಳೆ ಕಾರ್ಯಕ್ರಮಕ್ಕೆ ಯಾವುದೇ ಜನಪ್ರತಿನಿಧಿಗಳು ಆಗಮಿಸಿದ ಕಾರಣ 12 ಗಂಟೆ ವೇಳೆಗೆ ತಾಳ್ಮೆ ಕಳೆದುಕೊಂಡ ಸಮುದಾಯದ ಮುಖಂಡರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಬಳಿ ತೆರಳಿ ಏಕೆ ತಡವಾಗುತ್ತದೆ ಎಂದು ಪ್ರಶ್ನಿಸಿದರು. ಅದಕ್ಕೆ ಸುದರ್ಶನ್, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಮೈಸೂರಿನಲ್ಲಿ ಇಲ್ಲ. ಈ ಹಿನ್ನೆಲೆ ಅವರು ಬರಲು ಸಾಧ್ಯವಾಗಿಲ್ಲ. ಸ್ವಲ್ಪ ಹೊತ್ತಿಗೆ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ ಆಗಮಿಸಲಿದ್ದಾರೆ ಕಾರ್ಯಕ್ರಮ ಆರಂಭಿಸೋಣ ಎಂದು ಉತ್ತರಿಸಿದರು.
ನಂತರ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದಂತೆ ಮುಖಂಡರು ತಮ್ಮ ಬೇಸರ ಹೊರ ಹಾಕಿ, ಡಿಸಿ, ಶಾಸಕರು, ಸಂಸದರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು ಎಲ್ಲರೂ ಕಿರುರಂಗ ಮಂದಿರದಿಂದ ಹೊರ ಬಂದು ಕಲಾಮಂದಿರದ ಮುಂಭಾಗವಿರುವ ಮೆಟ್ಟಿಲುಗಳ ಮೇಲೆ ಕುಳಿತು ಜಿಲ್ಲಾಡಳಿತದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಶಾಸಕ ಕೆ.ಹರೀಶ್ ಗೌಡ ಆಗಮಿಸಿದ ವೇಳೆ ಅವರ ಬಳಿ ತಮ್ಮ ಬೇಸರ ತಿಳಿಸಿದರು. ನಾವು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಎಂದು ಆಗಮಿಸಿದ್ದೇವೆ. ಆದರೆ, ಇಲ್ಲಿ ಒಬ್ಬರು ಜನ ಪ್ರತಿನಿಧಿಗಳು ಚಿಕ್ಕ ಸಮುದಾಯ ಎಂದು ಕಡೆಗಣಿಸುತ್ತಿದ್ದಾರೆ ಎಂದು ಸಮುದಾಯದ ಮುಖಂಡರು ಅಳಲು ತೋಡಿಕೊಂಡರು. ಅದಕ್ಕೆ ಹರೀಶ್‍ಗೌಡ ಪ್ರತಿಕ್ರಿಯಿಸಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮೈಸೂರಿನಲ್ಲಿ ಇಲ್ಲ. ಅವರು ಇದ್ದಿದ್ದರೆ, ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು ಎಂದರು.
ನಾನು ಬೇರೆಡೆ ಪ್ರವಾಸಕ್ಕೆ ತೆರಳಿದ್ದೆ. ಇಂದು ಮುಂಜಾನೆ 5 ಗಂಟೆಗೆ ಮೈಸೂರಿಗೆ ಬಂದೆ. ನಂತರ ಮನೆ ಬಳಿ ಇದ್ದ ಜನರ ಸಮಸ್ಯೆಗಳನ್ನು ಆಲಿಸಿ ನಂತರ ಉಪಹಾರ ಸೇವಿಸದೇ ನೇರವಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಕಾರ್ಯಕ್ರಮ ತಡವಾಗಿದೆ. ಆದರೆ ಈವರೆಗೂ ನಾನು ಮತ್ತು ಕಾಂಗ್ರೆಸ್ ಪಕ್ಷ ವಿಶ್ವಕರ್ಮ ಸಮುದಾಯದ ಜೊತೆ ಇದ್ದೇವೆ. ಬನ್ನಿ ಕಾರ್ಯಕ್ರಮ ಮಾಡೋಣ ಎಂದು ಸಮಾಧಾನ ಪಡಿಸಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಕರೆ ತಂದರು.




























