ವಿಶ್ವಕರ್ಮರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು

ಸಂಜೆವಾಣಿ ನ್ಯೂಸ್
ಮೈಸೂರು: ಜ.02:-
ಈ ನೆಲದ ಸಂಸ್ಕøತಿ ಮತ್ತು ಪರಂಪರೆ ಬಿಂಬಿಸುವುದು ಅವರ ಶಿಲ್ಪಕಲೆಗಳ ವಿಶೇಷ. ವಿಶ್ವಕರ್ಮರು ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ವೃತ್ತಿಗೆ ಆಧುನಿಕ ಸ್ಪರ್ಶ ನೀಡಬೇಕಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಸಲಹೆ ನೀಡಿದರು.


ನಗರದ ಕಿರುರಂಗಮಂದಿರದಲ್ಲಿ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಪಾಲಿಕೆ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜಕಣಾಚಾರಿ ಅವರ ಕೆತ್ತನೆಗಳನ್ನು ದಕ್ಷಿಣ ಭಾರತದ ಹಲವು ದೇವಾಲಯಗಳಲ್ಲಿ ನಾವು ಕಾಣಬಹುದು. ವಿಶ್ವಕರ್ಮರು ಕಬ್ಬಿಣ, ಚಿನ್ನಬೆಳ್ಳಿ, ಶಿಲ್ಪಕಲೆ ಹಾಗೂ ಮರಗೆಲಸದ ಕುಲಕಸುಬುಗಳನ್ನು ನಿರ್ವಹಿಸುತ್ತಿದ್ದಾರೆ. ಈ ಕಲೆಗಳನ್ನು ಮುಂದಿನ ತಲೆಮಾರುಗಳಿಗೂ ಕಲಿಸಿ ಬೆಳೆಸಬೇಕು ಎಂದು ಹೇಳಿದರು.


ಜಕಣಾಚಾರಿ ಬಿಟ್ಟು ಹೋಗಿರುವ ಬೆಲೆ ಕಟ್ಟಲಾಗದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ವಿಶ್ವಕರ್ಮ ಸಮುದಾಯದವರು ಜಕಣಾಚಾರಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ, ಶಿಲ್ಪಕಲೆಯಲ್ಲೂ ಉತ್ತುಂಗದ ಸಾಧನೆ ಮಾಡಬೇಕು. ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ವೃತ್ತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತ ಸೇರಿದಂತೆ ವಿಶ್ವದ ವಿವಿಧ ಕಡೆ ಜಕಣಾಚಾರಿಯವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ. ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಇವುಗಳೇ ಸಾಕ್ಷಿ. ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆ ವಿಶ್ವಕರ್ಮರ ಪ್ರಸ್ತುತತೆ ಬಿಂಬಿಸುತ್ತಿದೆ. ನಶಿಸಿಹೋಗುತ್ತಿರುವ ವಿಶ್ವಕರ್ಮರ ಕುಲಕಸುಬುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ ಮುಂದುವರಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು.


ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಇಂದು ವಿಶ್ವವಿಖ್ಯಾತ ಶಿಲ್ಪಿಯ ಸಂಸ್ಮರಣೆ ಎಲ್ಲೆಡೆ ನಡೆಯುತ್ತಿದೆ. ವಿಶ್ವಕರ್ಮರನ್ನು ವಿಶ್ವರೂಪ, ದಕ್ಷಿಣಾಚಾರ್ಯ, ಜಕಣಾಚಾರ್ಯ, ಸ್ಥಪತಿ ಇನ್ನಿತರ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಸ್ಥಪತಿ ಎಂದರೇ ಶಿಲ್ಪಿಗಳಲ್ಲಿ ಅಗ್ರಗಣ್ಯ ಎಂದರ್ಥ. ವಾಸ್ತುಪ್ರಕಾರ ಶಿಲ್ಪ ರಚಿಸುವವರನ್ನು ಸ್ಥಪತಿ ಎನ್ನಲಾಗುತ್ತದೆ. ಸ್ಥಪತಿಯಾದವನು ತನ್ನ ಹೆಸರನ್ನು ಎಲ್ಲೂ ಪ್ರಸ್ತುತಪಡಿಸುವುದಿಲ್ಲ ಎಂದರು.
ಸೃಷ್ಟಿಯ ಮೂಲಕರ್ತೃವಾಗಿರುವ ಜಕಣಾಚಾರಿಯವರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನ ಎಲ್ಲೆಡೆ ಪಸರಿಸಿದೆ. ಪ್ರಪಂಚದ ಎಲ್ಲ ವಿದ್ಯೆಗಳ ಮೂಲವಾಗಿರುವ ಜಕಣಾಚಾರಿ ಅವರನ್ನು ಜಗತ್ತಿನ ಮೊದಲ ಮುಖ್ಯ ಎಂಜಿನಿಯರ್ ಎನ್ನಬಹುದು. ಜಕಣಾಚಾರಿ ಸಾಮಾನ್ಯ ಜನರಿಗೆ ದೇವರ ಪರಿಕಲ್ಪನೆ ನೀಡುವ ಮಧ್ಯಸ್ಥಿಕೆದಾರರಾಗಿದ್ದರು. ವಿಶ್ವಕರ್ಮರ ಶಿಲ್ಪಕಲೆ ಅಮರವಾಗಿದೆ ಎಂದು ತಿಳಿಸಿದರು.


ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಅಮರಶಿಲ್ಪಿ ಜಕ್ಕಣಾಚಾರಿ ದೇಶಕಂಡ ಒಬ್ಬ ಮಹಾನ್ ಶಿಲ್ಪಿ. ಅವರು ಬದುಕಿದ್ದರು ಎನ್ನುವುದಕ್ಕೆ ಬೇಲೂರು ಹಳೇಬೀಡು, ಪಟ್ಟದಕಲ್ಲುಗಳಲ್ಲಿರುವ ಐತಿಹಾಸಿಕ ಸ್ಮಾರಕಗಳೇ ಸಾಕ್ಷಿ. ದೇಶದಲ್ಲಿ ಪ್ರತಿಯೊಂದು ಐತಿಹಾಸಿಕ ಸ್ಮಾರಕಗಳು ವಿಶ್ವಕರ್ಮ ಸಮುದಾಯದ ಶಿಲ್ಪಿಗಳಿಂದ ನಿರ್ಮಾಣವಾದವು. ಇಂತಹ ಐತಿಹಾಸಿಕ ಸ್ಮಾರಕಗಳಿಂದ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಬಹಳಷ್ಟು ಪ್ರಭಾವ ಬೀರಿದೆ ಎಂದು ಹೇಳಿದರು.


ಜಕಣಾಚಾರಿ ಇಲ್ಲದಿದ್ದರೂ ಅವರ ಶಿಲ್ಪಕಲೆಗಳನ್ನು ಇಂದಿಗೂ ನಾವು ಕಾಣಬಹುದಾಗಿದೆ. ಬೇಲೂರು, ಹಳೇಬಿಡುಗಳಲ್ಲಿರುವ ದೇಗುಲಗಳು ಜಕಣಾಚಾರಿಯಿಂದ ನಿರ್ಮಾಣ ವಾದವುಗಳೆಂದು ಶಿಲಾಶಾಸನಗಳೇ ಹೇಳುತ್ತಿವೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರು ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಹೇಳುವ ಮೂಲಕ ಅವರನ್ನು ಹಾಗೂ ವಿಶ್ವಕರ್ಮ ಸಮುದಾಯವನ್ನು ಅವಮಾನಿಸಲು ಮುಂದಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.


ಕಾರ್ಯಕ್ರದಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ (ನಿವೃತ್ತ) ಮಂಟೇಲಿಂಗಾಚಾರ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಮತ್ತಿತರರು ಇದ್ದರು.