ಮಂಗಳೂರು: ಕೋಮು ದ್ವೇಷ ನಿಗ್ರಹಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ವಿಶೇಷ ಕಾರ್ಯಪಡೆಯನ್ನು (ಸ್ಪೆಷಲ್ ಆ?ಯಕ್ಷನ್ ಫೋರ್ಸ್) ಮಂಗಳೂರಿನಲ್ಲಿ ಇಂದು ಸ್ಥಾಪಿಸಲಾಯಿತು. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ವಿಶೇಷ ಪಡೆಯನ್ನು ಉದ್ಘಾಟಿಸಿ, ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೃಹ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯು ವಿಶಿಷ್ಟವಾದ ಜಿಲ್ಲೆಯಾಗಿದ್ದು, ಇಲ್ಲಿನ ಜನ ಸುಸಂಸ್ಕೃತರು. ಸಾಹಿತ್ಯ, ಕಲೆ, ಸಂಸ್ಕೃತಿ ಇಂದಿಗೂ ಇಲ್ಲಿ ಉಳಿದು ಬೆಳೆಯುತ್ತಿದೆ. ಶೈಕ್ಷಣಿಕ ಕ್ರಾಂತಿಯೂ ಎಲ್ಲಕ್ಕಿಂತ ಮೊದಲು ಇಲ್ಲಿ ಆಗಿದ್ದು, ದೇಶದಲ್ಲೇ ಮೊದಲ ಖಾಸಗಿ ಮೆಡಿಕಲ್ ಕಾಲೇಜು ಇಲ್ಲಿಯೇ ಆರಂಭಗೊಂಡಿತು ಎಂದು ಸ್ಮರಿಸಿದರು.
ಆದರೆ, ಈ ಎಲ್ಲದರ ನಡುವೆ ಇತ್ತೀಚೆಗೆ ದ್ವೇಷ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದನ್ನು ಆದಷ್ಟು ಶೀಘ್ರವಾಗಿ ಹತ್ತಿಕ್ಕದಿದ್ದರೆ ಬೇರೆ ಭಾಗಗಳಿಗೂ ಹರಡುವ ಸಾಧ್ಯತೆ ಇದೆ ಎಂದು ಸಚಿವರು ಎಚ್ಚರಿಸಿದರು. ಈ ಹಿಂದೆ ತಾವು ಟಾಸ್ಕ್ ಫೋರ್ಸ್ ರಚಿಸಲು ಆಗಿನ ಕಮಿಷನರ್‌ಗೆ ಸೂಚಿಸಿದ್ದರೂ, ಅದು ನಿರೀಕ್ಷಿತ ಪ್ರಯೋಜನ ನೀಡಿಲ್ಲ ಎಂದು ಹೇಳಿದರು.
ಕೋಮು ದ್ವೇಷ ನಿಗ್ರಹಕ್ಕೆ ವಿಶೇಷ ಪಡೆ:
ಇತ್ತೀಚೆಗೆ ನಡೆದ ಮೂರು ಕೊಲೆ ಘಟನೆಗಳ ನಂತರ, ಒಂದು ವಿಶೇಷ ಪಡೆಯನ್ನು ರಚಿಸಬೇಕೆಂದು ತಮಗೆ ಅನಿಸಿತ್ತು. ಇದಕ್ಕೆ ಕಠಿಣ ನಿರ್ಧಾರ ಮತ್ತು ಕಠಿಣ ಕ್ರಮದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಒಂದು ವಾರದಲ್ಲಿಯೇ ರೂಪುರೇಷೆ ಸಿದ್ಧಪಡಿಸಿ, ಇಂದು ಈ ಪಡೆಗೆ ಚಾಲನೆ ನೀಡಲಾಗಿದೆ ಎಂದರು.
ನಕ್ಸಲರೆಲ್ಲರೂ ಶರಣಾಗತಿ ಆಗಿರುವ ಹಿನ್ನೆಲೆಯಲ್ಲಿ ನಕ್ಸಲ್ ಫೋರ್ಸ್ ಅಗತ್ಯವಿಲ್ಲ ಎಂದು ಸರ್ಕಾರ ತೀರ್ಮಾನಿಸಿದ್ದು, ಅದೇ ತಂಡವನ್ನು ಈ ಸ್ಪೆಷಲ್ ಆ?ಯಕ್ಷನ್ ಫೋರ್ಸ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಈ ಕಾರ್ಯಪಡೆಯು ಕೋಮು ದ್ವೇಷ ಹರಡುವ ಜನ ಮತ್ತು ಸಮುದಾಯವನ್ನು ಹತ್ತಿಕ್ಕುವ ಕೆಲಸ ಮಾಡಲಿದೆ. ಈ ಫೋರ್ಸ್‌ಗೆ ಬೇರೆ ಯಾವುದೇ ಕೆಲಸವಿಲ್ಲ, ಶಾಂತಿ ನೆಲೆಸಬೇಕು ಎಂಬ ಒಂದೇ ಕಾರಣಕ್ಕೆ ಇದನ್ನು ಸ್ಥಾಪಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳೂ ಈ ಕಾರ್ಯಕ್ಕೆ ಆಶೀರ್ವದಿಸಿದ್ದು, ಈ ಕಾರ್ಯಪಡೆ ಯಶಸ್ವಿಯಾಗಲಿದೆ ಎಂಬ ನಂಬಿಕೆ ಇದೆ ಎಂದು ಡಾ. ಪರಮೇಶ್ವರ್ ಹೇಳಿದರು. ಈ ಭಾಗದ ಜನರಿಗೆ ಮನವಿ ಮಾಡಿದ ಸಚಿವರು, “ಈ ಕಾರ್ಯಪಡೆಗೆ ಕೆಲಸ ಕೊಡಬೇಡಿ. ಶಾಂತಿ ನೆಲೆಸಿ, ಕೋಮು ಸಾಮರಸ್ಯ ತಂದರೆ ಇವರಿಗೆ ಕೆಲಸವಿಲ್ಲ. ಕೋಮು ಸೌಹಾರ್ದತೆ ಹಾಳಾದರೆ ಈ ಕಾರ್ಯಪಡೆಗೆ ಕೆಲಸ ಹೆಚ್ಚಾಗುತ್ತದೆ” ಎಂದರು.
ಶಾಂತಿಗಾಗಿ ಮನವಿ:
“ಈ ಜಿಲ್ಲೆಯಲ್ಲಿ ಶಾಂತಿಯಾದರೆ ಇಡೀ ಕರ್ನಾಟಕದಲ್ಲಿ ಶಾಂತಿ ನೆಲೆಸುತ್ತದೆ. ಈ ಕಾರ್ಯಪಡೆಯನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ. ಅಗತ್ಯ ಬಿದ್ದರೆ ಇದರ ಸಂಖ್ಯೆಯನ್ನು ಹೆಚ್ಚು ಮಾಡುತ್ತೇವೆ” ಎಂದು ಸಚಿವರು ಭರವಸೆ ನೀಡಿದರು. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಇತ್ತೀಚೆಗೆ ಚಟುವಟಿಕೆಗಳು ಹೆಚ್ಚಾಗಿದ್ದು, ಬೇರೆ ಜಿಲ್ಲೆಗಳ ವಾತಾವರಣ ಭಿನ್ನವಾಗಿರುವುದರಿಂದ ಅಲ್ಲಿ ಈ ಕಾರ್ಯಪಡೆ ಅಗತ್ಯ ಬೀಳುವುದಿಲ್ಲ ಎಂದು ವಿವರಿಸಿದರು. ಮುಂದಿನ ದಿನಗಳಲ್ಲಿ ಈ ಜಿಲ್ಲೆಗೂ ಈ ಕಾರ್ಯಪಡೆ ಅಗತ್ಯ ಬೀಳದಂತಹ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸಿದರು.
ಕೊನೆಯದಾಗಿ, ಈ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಮಾಡಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ, ಇಲ್ಲಿನವರೇ ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ಬೇರೆ ಕಡೆಗೆ ಕಳುಹಿಸುತ್ತಿದ್ದಾರೆ. ಮುಂದೆ ಈ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತಾಗಲಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆಶಿಸಿದರು.