ವಿಭಾಗೀಯ ಕೃಷಿಮೇಳಕ್ಕೆ ಫ್ಲೆಕ್ಸ್ ವಿವಾದದ ವಿಘ್ನ..!ಹಾಲಿ ಬದಲು ಮಾಜಿ ಶಾಸಕರ ಫ್ಲೆಕ್ಸ್ ಅಳವಡಿಕೆ

ಪುತ್ತೂರು; ಸರ್ಕಾರದ ಅಧೀನ ಸಂಸ್ಥೆಯಾಗಿರುವ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಆಶ್ರಯದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ೩ ದಿನಗಳ ಕಾಲ ನಡೆಯಲಿರುವ ಕೃಷಿಮೇಳ ಹಾಗೂ ಸಸ್ಯಜಾತ್ರೆಗೆ ಆರಂಭದಲ್ಲಿಯೇ ಫ್ಲೆಕ್ಸ್ ವಿವಾದ ವಿಘ್ನ ಉಂಟಾಗಿದೆ. ಸರ್ಕಾರದ ಅನುದಾನದಲ್ಲಿ ಕೃಷಿಕ ಸಮಾಜ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಮೇಳವನ್ನು ಆಯೋಜಿಸಿದೆ. ಮಹಾಲಿಂಗೇಶ್ವರ ದೇವಳದ ರಥಬೀದಿಯಲ್ಲಿ ಅಳವಡಿಕೆಯಾದ ಮುಖ್ಯ ದ್ವಾರಕ್ಕೆ ಮಾಜಿ ಶಾಸಕ ಫೊಟೋ ಅಳವಡಿಕೆ ಮಾಡಿ ಸಂಜೀವ ಮಠಂದೂರು ದ್ವಾರ ಎಂದು ಬಿಂಬಿಸುವ ಪ್ರಯತ್ನ ಸ್ಥಳೀಯ ಕೃಷಿಕ ಸಮಾಜದ ಮುಖಂಡರಿಂದ ನಡೆದಿದ್ದು, ಪುತ್ತೂರು ಬ್ಲಾಕ್ ಕಾಂಗ್ರೇಸ್ ಆಕ್ಷೇಪದೊಂದಿಗೆ ಅಧಿಕಾರಿಗಳು ಈ ಪ್ಲೆಕ್ಸ್ ನ್ನು ತೆರವುಗೊಳಿಸಿದ್ದಾರೆ.
ಮುಖ್ಯ ದ್ವಾರದಲ್ಲಿ ಹಾಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಫೋಟೊ ಇರುವ ಫ್ಲೆಕ್ಸ್ ಅಳವಡಿಕೆ ಮಾಡುವುದನ್ನು ಬಿಟ್ಟು ಅದರಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಫೋಟೊ ಹಾಕಿರುವ ಫ್ಲೆಕ್ಸ್ ಅಳವಡಿಕೆ ಮಾಡಿರುವುದು ಪುತ್ತೂರಿನ ಕಾಂಗ್ರೇಸ್ ಕಣ್ಣನ್ನು ಕೆಂಪಗಾಗಿಸಿದೆ. ಈ ಬಗ್ಗೆ ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಪಿ.ಆಳ್ವ ಅವರು ಅಧಿಕಾರಿಗಳ ಗಮನಕ್ಕೆ ತಂದು ಫ್ಲೆಕ್ಸ್ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ರಾಜಕೀಯ’ ಚಿತಾವಣೆ
ಸರ್ಕಾರಿ ಅಧೀನ ಸಂಸ್ಥೆಯಾದ ಕೃಷಿಕ ಸಮಾಜದಲ್ಲಿ ಪುತ್ತೂರು ಹಾಗೂ ಸುಳ್ಯ ತಾಲೂಕಿನ ಬಿಜೆಪಿ ಪಕ್ಷದ ಮುಖಂಡರಿದ್ದು, ಹಾಲಿ ಶಾಸಕರ ಬದಲಿಗೆ ಮಾಜಿ ಶಾಸಕರ ಫೋಟೊ ಹಾಕಿರುವುದು ಇವರದೇ ಚಿತಾವಣೆ ಎನ್ನಲಾಗಿದೆ. ಕೃಷಿ ಮೇಳದ ಲಾಭವನ್ನು ಪಕ್ಷದ ದೃಷ್ಟಿಯಿಂದ ಮಾಡಿಕೊಳ್ಳುವ ಹುನ್ನಾರ ಇದರ ಹಿಂದಿದೆ ಎಂದ ಆರೋಪ ಕಾಂಗ್ರೇಸ್ ಮಾಡಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷದ ಹಾಲಿ ಶಾಸಕರ ಫ್ಲೆಕ್ಸ್ ನ್ನು ಮುಖ್ಯ ದ್ವಾರದಲ್ಲಿ ಅಳವಡಿಕೆ ಮಾಡುವುದು ರೂಢಿ. ಪುತ್ತೂರಿನ ಶಾಸಕ ಅಶೋಕ್ ರೈ ಅವರ ಮೂಲಕವೇ ಈ ಕೃಷಿಮೇಳ ಆಯೋಜನೆಯಾಗಿದೆ. ಅವರ ಪ್ರಯತ್ನದ ಮೂಲಕವೇ ಅನುದಾನವೂ ಬಂದಿದೆ. ಆದರೆ ಈ ಕೃಷಿಕ ಸಮಾಜದಲ್ಲಿನ ಕೆಲ ಬಿಜೆಪಿಪರ ಮನಸ್ಸುಗಳು ಕೃಷಿ ಮೇಳವನ್ನೇ ರಾಜಕೀಯಗೊಳಿಸಲು ಮುಂದಾಗಿರುವುದು ಫ್ಲೆಕ್ಸ್ ವಿವಾದಕ್ಕೆ ಕಾರಣವಾಗಿದೆ. ಈ ಮುಖ್ಯದ್ವಾರ ನಿರ್ಮಾಣ ದಿನಗಳ ಮೊದಲೇ ಆಗಿತ್ತು. ಆದರೆ ಮಾಜಿ ಶಾಸಕರ ಫ್ಲೆಕ್ಸ್ ಅಳವಡಿಕೆಯನ್ನು ಕೊನೆ ಕ್ಷಣದಲ್ಲಿ ಮಾಡಲಾಗಿದೆ. ಕೊನೆಯ ಕ್ಷಣದಲ್ಲಿ ಫ್ಲೆಕ್ಸ್ ಅಳವಡಿಕೆ ಮಾಡಿದರೆ ಯಾರ ಗಮನವೂ ಅದರತ್ತ ಹೋಗುವುದಿಲ್ಲ ಎಂಬ ಬುದ್ಧಿವಂತಿಕೆ ಇದರ ಹಿಂದೆ ಅಡಗಿದೆ. ಕಾರ್ಯಕ್ರಮ ಆರಂಭವಾದ ಬಳಿಕ ಇದನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದು ಸ್ಥಳೀಯ ಕೃಷಿಕ ಸಮಾಜದ ಕೆಲ ಮುಖಂಡರ ಯೋಚನೆಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಫ್ಲೆಕ್ಸ್ ಅಳವಡಿಕೆಯಾದ ತಕ್ಷಣವೇ ಎಚ್ಚೆತ್ತುಕೊಂಡ ಕಾಂಗ್ರೆಸ್ ಕಾರ್ಯಕರ್ತರು ತಕ್ಷಣ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದರಿಂದ ಪಕ್ಷ ಲಾಭಕ್ಕೆ ಹೊರಟಿದ್ದ ಮುಖಂಡರ ಯೋಜನೆಗೆ ಕಾಂಗ್ರೇಸ್ ತಿರುಗೇಟು ನೀಡಿದೆ.
–ಕೋಟ್–
ಹಾಲಿ ಶಾಸಕರ ಫೋಟೊ ಹಾಕದೆ ಮಾಜಿ ಶಾಸಕರ ಫೊಟೊ ಹಾಕಿದ್ದು ತಪ್ಪು. ಹಾಗಾಗಿ ಅಧಿಕಾರಿಗಳ ಗಮನಕ್ಕೆ ತಂದು ತೆರವುಗೊಳಿಸಲಾಗಿದೆ. ನಮ್ಮಲ್ಲೂ ೫೦೦ ಸದಸ್ಯರ ರೈತಧ್ವನಿ ಒಕ್ಕೂಟ ಇದೆ. ಆದರೆ ನಮಗೆ ಆಮಂತ್ರಣವೇ ಇಲ್ಲ. ಹಾಗಿದ್ದರೂ ಶಾಸಕರ ಜತೆಗೆ ನಾವು ಹೋಗಿದ್ದೇವೆ. ರಾಜಕೀಯ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ- ಕೆ.ಪಿ.ಆಳ್ವ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ.
ಕೃಷಿಕ ಸಮಾಜ ಮಾಡುವ ಕೃಷಿಮೇಳಕ್ಕೆ ಕೃಷಿಕ ಸಮಾಜದವರು ಸ್ವಾಗತ ಮಾಡದೆ ಬೇರೆ ಯಾರು ಮಾಡುವುದು. ನಾನು ಕೃಷಿಕ ಸಮಾಜದ ಸಂಚಾಲಕ. ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ- ಸಂಜೀವ ಮಠಂದೂರು ಮಾಜಿ ಶಾಸಕ.