ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ: ವರ್ಷಕ್ಕೆ 125 ದಿನ ಉದ್ಯೋಗ ಖಾತ್ರಿ: ಕೆಲಸ ಸಿಗದಿದ್ದರೆ ನಿರುದ್ಯೋಗ ಭತ್ಯೆ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಫೆ.01:-
ಭಾರತದ ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು 2005ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ)ಯನ್ನು ರದ್ದುಗೊಳಿಸಿ, ಅದರ ಬದಲಿಗೆ ವಿಕಸಿತ ಭಾರತ ರೋಜ್‍ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)' ಅಥವಾವಿಬಿ-ಜಿ ರಾಮ್ ಜಿ’ (ಗಿಃ-ಉ ಖಂಒ ಉ) ಕಾಯ್ದೆ 2025ನ್ನು ಜಾರಿಗೆ ತಂದಿದೆ ಎಂದು ಯೋಜನಾ ಸಮಿತಿ ಜಿಲ್ಲಾ ಸಂಚಾಲಕ ಸದಾನಂದ ಗೌಡ ತಿಳಿಸಿದರು.


ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿಗಳ ಅಂಕಿತ ಪಡೆದಿರುವ ಈ ಹೊಸ ಕಾಯ್ದೆಯು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ 2047ರ ವೇಳೆಗೆ `ವಿಕಸಿತ ಭಾರತ’ ನಿರ್ಮಾಣದ ಗುರಿಯನ್ನು ಹೊಂದಿದೆ ಎಂದರು.


ಈ ಕಾಯ್ದೆಯಡಿಯಲ್ಲಿ ಹಾಜರಾತಿ ವ್ಯವಸ್ಥೆ, ಜಿಪಿಎಸ್ ಮೇಲ್ವಿಚಾರಣೆ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಕೆಲಸ ಕೇಳಿದ ದಿನದಿಂದ 15 ದಿನಗಳೊಳಗೆ ಉದ್ಯೋಗ ನೀಡದಿದ್ದರೆ ರಾಜ್ಯ ಸರ್ಕಾರಗಳು ಕಡ್ಡಾಯವಾಗಿ ನಿರುದ್ಯೋಗ ಭತ್ಯೆ ನೀಡಬೇಕು ಎಂಬ ಮಹತ್ವದ ಅಂಶವನ್ನು ಕಾಯ್ದೆಯಲ್ಲಿ ಸೇರಿಸಲಾಗಿದೆ ಎಂದು ವಿವರಿಸಿದರು.


ಇದು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಡಿಜಿಟಲ್ ಆಡಳಿತವನ್ನು ಒಟ್ಟುಗೂಡಿಸುವ ಮೂಲಕ 2047ರ ವಿಕಸಿತ ಭಾರತದ ಗುರಿಯನ್ನು ತಲುಪುವತ್ತದ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಂದ್ರ ಈ ಹೊಸ ಕಾಯ್ದೆಯಡಿ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 125 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ ನರೇಗಾ ಯೋಜನೆಯಲ್ಲಿ ಕೇವಲ 100 ದಿನಗಳ ಉದ್ಯೋಗ ಮಿತಿ ಇದ್ದು, ಇದೀಗ ಅದನ್ನು ಹೆಚ್ಚಿಸಿರುವುದು ಗ್ರಾಮೀಣ ಕುಟುಂಬಗಳ ಆರ್ಥಿಕ ಭದ್ರತೆಗೆ ದೊಡ್ಡ ಬಲ ನೀಡಲಿದೆ ಎಂದರು.
ವಿಬಿ-ಜಿ ರಾಮ್ ಜಿ ಯೋಜನೆ ಕೇಂದ್ರ ಪುರಸ್ಕೃತ ಮಾದರಿಯಲ್ಲಿ ಜಾರಿಯಾಗಿದ್ದು, 60:40 ಅನುಪಾತದಲ್ಲಿ ವೆಚ್ಚ ಹಂಚಿಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ವಿಬಿ-ಜಿ ಯೋಜನಾ ಅನುಷ್ಠಾನದ ಜಿಲ್ಲಾ ಸಂಚಾಲಕ ವೆಂಕಟಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರೀಕ್ಷಿತ್ ರಾಜ ಅರಸ್, ತಾಲೂಕು ಪ್ರಧಾನ ಕಾರ್ಯದರ್ಶಿ ರವಿ, ನಗರ ಅಧ್ಯಕ್ಷ ಟಿ. ರಮೇಶ್, ಮುಖಂಡರಾದ ಆರ್.ಟಿ. ಸತೀಶ್, ಲೋಕ ಪಾಲಯ್ಯ, ಸಜೇಂದ್ರ, ಚಂದ್ರಶೇಖರ ಸೇರಿದಂತೆ ಹಲವರು ಹಾಜರಿದ್ದರು.