ವಿಬಿ ಜಿ ರಾಮ್ ಜಿ ಜಾರಿ- ಎ ಐ ಕೆ ಕೆ ಎಂ ಎಸ್ ಖಂಡನೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಜ.30: ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ  ಮಿಷನ್ (ಗ್ರಾಮೀಣ) ಮಸೂದೆ- 2025 (ವಿಬಿ–ಜಿ ಆರ್ ಎ ಎಮ್ ಜಿ) ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ಸದಸ್ಯರು ಇಂದು ತಹಶೀಲ್ದಾರ್ ಮೂಲಕ ಪ್ರಾಧಾನಿಯವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಅವರು  ಮಾತನಾಡುತ್ತಾ ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿಪಡಿಸುವ ಉದ್ದೇಶದಿಂದ ತಂದಿದ್ದ ಎಂಜಿ ನರೇಗಾ ಕಾಯ್ದೆಯ ಬದಲಿಗೆ ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ- 2025 ಅನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಹೀನ ಪ್ರಯತ್ನವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ.

ಈ ಮಸೂದೆಯು ಎಂಜಿ ನರೇಗಾ ಕಾಯ್ದೆಯನ್ನು  ಮತ್ತು ಅದರಲ್ಲಿದ್ದ ಉದ್ಯೋಗದ ಶಾಸನಬದ್ಧ ಖಾತ್ರಿಯನ್ನು ತೆಗೆದುಹಾಕುವ ಪ್ರಯತ್ನವಾಗಿದೆ. ಯೋಜನೆಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳ ಯಾವುದೇ ಪಾತ್ರವನ್ನು ನಿರಾಕರಿಸುತ್ತಾ, ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ನೀಡಿ, ಒಕ್ಕೂಟ ವ್ಯವಸ್ಥೆ ಅಡಿಪಾಯವನ್ನು ನಾಶಗೊಳಿಸುವ ಪ್ರಯತ್ನವಾಗಿದೆ. ಹಾಗೆಯೇ, ಕೇಂದ್ರ ಬಿಜೆಪಿ ಸರ್ಕಾರವು ತನ್ನ ಹಣಕಾಸಿನ ಜವಾಬ್ದಾರಿಯನ್ನು ಶೇ.60 ಕ್ಕೆ (ಹಿಂದೆ ಶೇ.100) ಇಳಿಸುವುದು ಮತ್ತು ಅದರ ಶೇ.40 ರಷ್ಟು ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸುವುದಾಗಿದೆ, ಹಾಗಾಗಿ ಇದನ್ನು ನಾವು ವಿರೋಧಿಸುತ್ತೇವೆ, ಜೊತೆಗೆ

ಜಾಬ್ ಕಾರ್ಡ್ಗಳನ್ನು ಸುಧಾರಣೆ ಮಾಡುವ ಘೋಷಣೆಯ ಮೂಲಕ ಗ್ರಾಮೀಣ ಜನರನ್ನು ಉದ್ಯೋಗದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದು ಈ ಯೋಜನೆಯ ಭಾಗವಾಗಿದೆ.

ಈಗ ಗ್ರಾಮೀಣ ಬಡ ಜನತೆಗೆ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಒದಗಿಸುವುದು ಈ ಘಳಿಗೆಯ ಅವಶ್ಯಕತೆ ಮತ್ತು ಈ ಕಾರ್ಯ ಕೇಂದ್ರ ಸರ್ಕಾರದ ಜವಾಬ್ದಾರಿ ಆಗಿರುವಾಗ,  ಈ ಕೇಂದ್ರ ಬಿಜೆಪಿ ಸರ್ಕಾರ ಅದಕ್ಕೆ ಸಂಪೂರ್ಣವಾಗಿ ವಿರುದ್ಧ ಗತಿಯಲ್ಲಿ ನಡೆದಿದೆ.

ಈ ಪ್ರಸ್ತಾಪಿತ ಮಸೂದೆಯು ಗ್ರಾಮೀಣ ಬಡ ಜನತೆಯ ಬದುಕುವ ಹಕ್ಕಿನ ಮೇಲಿನ ದಾಳಿ ಆಗಿರುವುದರಿಂದ ಅದನ್ನು ತೀರ್ವವಾಗಿ ಖಂಡಿಸುತ್ತೇವೆ. ಹಾಗೆಯೇ ಪ್ರತಿ ಕುಟುಂಬಕ್ಕೆ 200 ದಿನ ಕೆಲಸ, 600 ರೂ ಕೂಲಿ ವಿತರಿಸಬೇಕು ಎಂದರು ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಈ ಜನ ವಿರೋಧಿ, ಕಾರ್ಮಿಕ ವರ್ಗ ವಿರೋಧಿ ಪ್ರಯತ್ನವನ್ನು ಸೋಲಿಸಲು ಕೊನೆಯವರೆಗೂ ಹೋರಾಡಲು ಮುಂದೆ ಬರಬೇಕೆಂದು ದುಡಿಯುವ ಜನರಿಗೆ ಎ ಐ ಕೆ ಕೆ ಎಂ ಎಸ್ ನಾಯಕರು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಅನಿಲ್, ಗಣೇಶ್, ರಾಮಂಜಿನಿ, ರೈತರಾದ ಯಲ್ಲಮ್ಮ, ಹುಲಿಗೆಮ್ಮ, ಸುಬ್ಬಮ್ಮ, ಮಲ್ಲಯ್ಯ, ವಿರೇಶಪ್ಪ, ವಡ್ರ ಹುಲಿಗೆಮ್ಮ  ಸೇರಿದಂತೆ ಇತರರು ಉಪಸ್ಥಿತರಿದ್ದರು.