Home ಜಿಲ್ಲೆ ಬಳ್ಳಾರಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಂಜಾಗ್ರತಾ ಕ್ರಮ ಪಾಲಿಸಿ, ಸುರಕ್ಷಿತವಾಗಿರಿ

ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಂಜಾಗ್ರತಾ ಕ್ರಮ ಪಾಲಿಸಿ, ಸುರಕ್ಷಿತವಾಗಿರಿ

ಸಂಜೆವಾಣಿ ವಾರ್ತೆ

ವಿಜಯನಗರ, ಮಾ.05: ಪೂರ್ವ ಮುಂಗಾರು ಅವಧಿಯಲ್ಲಿ ವಿಜಯನಗರ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಮತ್ತು ಗಾಳಿ ಮಳೆಯಿಂದಾಗಿ ಸಾಕಷ್ಟು ಸಾವು ನೋವು ಸಂಭವಿಸಲಿವೆ. ಆದ್ದರಿಂದ ಸಾರ್ವಜನಿಕರು ಹಾಗೂ ವಿಶೇಷವಾಗಿ ರೈತರು ಜಿಲ್ಲಾಡಳಿತ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದ್ದು, ಪ್ರತಿಯೊಬ್ಬರೂ ಇವುಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿರಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮನವಿ ಮಾಡಿದರು.

 ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಆಯೋಜಿಸಲಾಗಿದ್ದು, ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೂರ್ವ ಮುಂಗಾರು ವೇಳೆ ಗುಡುಗು ಸಿಡಲು ಶಬ್ದ ಕೇಳಿಸಿದ ತಕ್ಷಣ ತೆರೆದ ಮೈದಾನ, ಗದ್ದೆ ಅಥವಾ ಗುಡ್ಡಗಾಡು ಪ್ರದೇಶದಲ್ಲಿದ್ದರೆ ಕೂಡಲೇ ಸುರಕ್ಷಿತ ಕಟ್ಟಡದ ಒಳಗೆ ಆಶ್ರಯ ಪಡೆಯಬೇಕು. ಒಂಟಿ ಮರ ಅಥವಾ ಎತ್ತರದ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ವಿದ್ಯುತ್ ಉಪಕರಣಗಳಾದ ಮೊಬೈಲ್, ಟಿವಿ, ಫ್ರಿಡ್ಜ್ ಮುಂತಾದ ವಿದ್ಯುತ್ ಉಪಕರಣಗಳ ಬಳಕೆ ಮಾಡಬಾರದು. ಕೇಂದ್ರ ಸರ್ಕಾರ ಸಿದ್ದಪಡಿಸಿರುವ ದಾಮಿನಿ ಆಪ್ ಬಳಸುವುದು ಸೂಕ್ತ. ಇದು ಸಿಡಿಲಿನ ಮುನ್ಸೂಚನೆ ನೀಡುತ್ತದೆ ಎಂದು ತಿಳಿಸಿದರು.

 ರೈತರು ಗುಡುಗು-ಮಿಂಚು ಆರಂಭವಾದಾಗ ಜಾನುವಾರುಗಳನ್ನು ಮರದ ಕೆಳಗೆ ಅಥವಾ ವಿದ್ಯುತ್ ಕಂಬಗಳಿಗೆ ಕಟ್ಟದೇ, ಸುರಕ್ಷಿತವಾದ ಶೆಡ್ ಅಥವಾ ಕೊಟ್ಟಿಗೆಯಲ್ಲಿ ಕಟ್ಟಬೇಕು. ಮಳೆ ಬರುವ ಮುನ್ಸೂಚನೆ ಇದ್ದಾಗ ಹೊಲ – ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ, ಸುರಕ್ಷಿತ ಪ್ರದೇಶಕ್ಕೆ ಸೇರಬೇಕು. ಗಾಳಿ ಮಳೆಗೆ ವಿದ್ಯುತ್ ತಂತಿಗಳು ತುಂಡಾಗಿ ಬೀಳುವ ಸಾಧ್ಯತೆ ಹೆಚ್ಚಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಅಂತಹ ಪ್ರಕರಣ ಕಂಡುಬಂದಲ್ಲಿ ತಕ್ಷಣ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಬೇಕು. ಮಳೆ ಸುರಿಯುವಾಗ ವಾಹನ ಚಾಲನೆ ಮಾಡುವವರು ರಸ್ತೆ ಬದಿಯ ಮರಗಳ ಕೆಳಗೆ ವಾಹನ ನಿಲ್ಲಿಸದೆ, ಸುರಕ್ಷಿತ ಜಾಗದಲ್ಲಿ ನಿಲ್ಲಿಸಬೇಕು.

ಈ ರೀತಿಯ ಯಾವುದೇ ಆಕಸ್ಮಿಕ ಘಟನೆಗಳು ಸಂಭವಿಸಿದಲ್ಲಿ ತಕ್ಷಣ ಹತ್ತಿರದ ತಹಶೀಲ್ದಾರ್ ಕಚೇರಿ ಅಥವಾ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 1077 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಕಾಧಿಕಾರಿ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ,  ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಸಹಾಯಕ ಆಯುಕ್ತ ವಿವೇಕಾನಂದ, ತಹಶೀಲ್ದಾರ್ ಶೃತಿ ಸೇರಿಂದತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.