ವಿದ್ಯೆಯ ಜೊತೆಗೆ ವಿನಯವು ಜೀವನಕ್ಕೆ ಅವಶ್ಯಕತೆ

ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.21: ಮಕ್ಕಳು ವಿದ್ಯೆ ಜೊತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಶಿಕ್ಷಕರ  ಮಾರ್ಗದಲ್ಲಿ ಗುರುತಿಸಿಕೊಂಡು ಸಾಧನೆಗೆ ಪೂರಕವಾದ ಕಲಿಕೆಯಲ್ಲಿ ತೊಡಗಬೇಕಾದ ಅಗತ್ಯವಿದೆ ಎಂದು ಪಂಪನಗೌಡ ಮುದ್ದಣ್ಣನವರ್ ಹೇಳಿದರು.
ನಗರದ ರಾಜೀವ್ ಗಾಂಧಿ ಮೆಮೋರಿಯಲ್  ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಒಂದರಿಂದ ಒಂಬತ್ತನೇ ತರಗತಿವರೆಗಿನ ಮಕ್ಕಳಿಗೆ  ನಡೆದ ಉಚಿತ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು.
ವಿದ್ಯೆ ಜೊತೆಗೆ ವಿನಯವು ಕೂಡಿದರೆ ಜೀವನ ಸುಖಮಯ ವಾಗಿರುತ್ತದೆ. ವಿದ್ಯೆಯು ವ್ಯಕ್ತಿಗೆ ವಿನಯವನ್ನು ಕಲಿಸುವುದರ ಜೊತೆಗೆ ವಿನಯದಿಂದ ಯಶಸ್ಸಿನ ಆರಂಭವಾಗಿ ಸದೃಢತೆಯೊಂದಿಗೆ ಮುಂದಿನ ಜೀವನ ಸುಖಮಯವಾಗಿರುತ್ತದೆ. ಶಿಕ್ಷಣ ಓದುಬರಹಕ್ಕೆ ಸೀಮಿತವಾಗದೆ ಸಂಸ್ಕಾರ ಪೂರಕವಾಗಿರಬೇಕು ವಿದ್ಯಾರ್ಥಿಗಳು ಗುರುಹಿರಿಯರ, ತಂದೆ ತಾಯಿಗಳ ಆಕಾಂಕ್ಷೆಗಳನ್ನು ಅರಿತು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಶಾಲೆಯ ಮುಖ್ಯ ಗುರು ಸಿದ್ದಲಿಂಗ ಜೆ. ಮಸೂತಿ ಮಾತನಾಡಿ, ಕ್ರಿಯಾಶೀಲತೆಯಿಂದ ನಮ್ಮ ಶಾಲೆಯಲ್ಲಿ ನಡೆದ ಉಚಿತ ಬೇಸಿಗೆ ತರಬೇತಿ ಶಿಬಿರದಲ್ಲಿ ಮಕ್ಕಳಿಗೆ ಪಠ್ಯವಿಷಯಗಳ ಮೂಲಭೂತ ಅಂಶಗಳ ಜೊತೆಗೆ ಪಠ್ಯೇತರ ವಿಷಯಗಳಾದ ಡ್ರಾಯಿಂಗ್, ಕರಾಟೆ, ಯೋಗ, ಡ್ಯಾನ್ಸ್, ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಮೂಲಕ ಮಕ್ಕಳ  ಅಭಿವೃದ್ಧಿಗೆ ಪೂರಕವಾದ ತರಬೇತಿಯನ್ನು ನೀಡಿದ್ದಾರೆ. ಮಕ್ಕಳು ತರಬೇತಿಯ ಸದುಪಯೋಗ ಪಡಿಸಿಕೊಂಡು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿ ಯಶಸ್ಸನ್ನು ಪಡೆಯುವಂತಾಗಲಿ ಎಂದರು.
ನಮ್ಮ ಶಾಲೆಯು ಅತ್ಯುತ್ತಮ ಸೌಲಭ್ಯಗಳೊಂದಿಗೆ ಅನುಭವಿ ಶಿಕ್ಷಕರಿಂದ ಕೂಡಿದ್ದು, ಗುಣಮಟ್ಟದ ಶಿಕ್ಷಣವನ್ನು ನೀಡಿ ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಕಾರ್ಯಪ್ರವೃತ್ತರಾಗಿ ಸೇವೆಯನ್ನು ಸಲ್ಲಿಸುತ್ತಿದ್ದೇವೆ. ಇಂತಹ ಶೈಕ್ಷಣಿಕ ಸೇವೆಗೆ ಎಲ್ಲಾ ಪಾಲಕ ಪೋಷಕರು ಮತ್ತು ಮಕ್ಕಳ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಶಾಲೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕ ಎಸ್. ಮಸೂತಿ, ಶಿಕ್ಷಕರಾದ ಬಿ.ಮಂಜುನಾಥ ರೆಡ್ಡಿ, ಹಿರಿಯ ಶಿಕ್ಷಕ ಕೆ.ಎಂ. ಮಲ್ಲಿಕಾರ್ಜುನಯ್ಯ ಸ್ವಾಮಿ ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಭಾಗವಹಿಸಿದ್ದರು.