ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಸದಸ್ಯ ಪರಶುರಾಮ್‍ಗೆ ಸನ್ಮಾನ

ಸಂಜೆವಾಣಿ ವಾರ್ತೆ

ವಿಜಯನಗರ, ಡಿ.25: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಸಮಿತಿ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾದ ಪಿ.ಪರಶುರಾಮ ಅವರನ್ನು ಹೊಸಪೇಟೆಯ ಆರ್.ಆರ್. ನಗರದಲ್ಲಿರುವ ಸರ್ಕಾರಿ ನಿವೃತ್ತ ನೌಕರರು ಹಾಗೂ ಹಿರಿಯ ನಾಗರಿಕರ ಮನೋರಂಜನಾ ಕೇಂದ್ರದಲ್ಲಿ ಬುಧವಾರ ಸನ್ಮಾನಿಸಲಾಯಿತು.

ಕೇಂದ್ರದ ಅಧ್ಯಕ್ಷರೂ ಆಗಿರುವ ನಿವೃತ್ತ ಪಿಎಸ್‍ಐ ರಾಮಪ್ಪ ಕಬ್ಬೇರ್ ಮಾತನಾಡಿ, ಈ ಸಂಘ ಯಾವುದೇ ಒಂದು ಇಲಾಖೆಗೆ ಸೀಮಿತವಾಗಿಲ್ಲ. ಪೊಲೀಸ್, ಕಂದಾಯ, ಆರೋಗ್ಯ, ಜೆಸ್ಕಾಂ ನಿವೃತ್ತ ನೌಕರರು ಹಾಗೂ ಹಿರಿಯರ ನಾಗರಿಕರ ಹಿತ ರಕ್ಷಣೆಗಾಗಿ ಶ್ರಮಿಸುತ್ತಿದೆ. ಸಂಘದಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡು, ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಅದಕ್ಕಾಗಿ ಸಂಘದ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, ಮನೋರಂಜನಾ ಕೇಂದ್ರಕ್ಕೆ ಅಗತ್ಯವಿರುವ ಒಳಾಂಗಣ ಕ್ರೀಡಾ ಪರಿಕರಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಮನೋರಂಜನಾ ಕೇಂದ್ರದ ಹಿತ ಬಯಸುವ ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟರ್ ಪರಶುರಾಮ್ ಅವರು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಕಾರ್ಯದರ್ಶಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಪರಶುರಾಮ್ ಮಾತನಾಡಿ, ಇಂತಹ ಸಂಘಟನೆಗಳು ಮತ್ತಷ್ಟು ಬೆಳೆಯಬೇಕು. ಸನ್ಮಾನಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.

ನಿವೃತ್ತ ಎಎಸ್‍ಐ ಎಚ್. ಶ್ರೀನಿವಾಸ್ ಮಾತನಾಡಿ, ಜೆಸ್ಕಾಂ ಆವರಣದಲ್ಲೇ ಗುತ್ತಿಗೆದಾರರ ಸಂಘದ ಕಚೇರಿ ಆರಂಭಿಸಿ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ಪಿಎಸ್ ಐಗಳಾದ ಯು.ಬಸವರಾಜ್, ಡಿ.ಡಿ.ರಜಪೂತ್, ನಿವೃತ್ತ ಎಎಸ್‍ಐಗಳಾದ ಲಕ್ಷ್ಮಣ ನಾಯ್ಕ, ಗಜಾನನ ನಾಯ್ಕ, ಕೇಂದ್ರದ ಪ್ರಮಖರಾದ ಶಂಕರಗೌಡ ಮತ್ತಿತರರು ಇದ್ದರು.