
ಸಂಜೆವಾಣಿ ನ್ಯೂಸ್
ಮೈಸೂರು: ಜೂ.11:- ವಿದ್ಯಾರ್ಥಿಗಳು ಸಿನಿಮಾ ನಟರು, ಕ್ರಿಕೆಟ್ ಆಟಗಾರರನ್ನು ನೋಡುವುದಕ್ಕೆ, ಅವರ ಜತೆ ಫೆÇೀಟೋ, ಸೆಲ್ಫಿ ತೆಗೆಯಿಸಿಕೊಳ್ಳುವುದಕ್ಕೆ ಮಾತ್ರ ತಮ್ಮ ಕನಸುಗಳನ್ನು ಸೀಮಿತಗೊಳಿಸಿಕೊಳ್ಳಬಾರದು. ಸ್ಪರ್ಧಾತ್ಮಕ ಪರೀಕೆಗಳಲ್ಲಿ ಉತ್ತೀರ್ಣರಾಗುವ ಮೂಲಕ ತಾವೇ ನಿಜವಾದ ಹೀರೋ-ಹೀರೋಯಿನ್ ಆಗಬೇಕು ಎಂದು ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ ಕರೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದÀ ಸಹಯೋಗದಲ್ಲಿ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಐಎಎಸ್, ಕೆಎಎಸ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕನಸು ಕಾಣಬೇಕು. ಕನಸುಗಳಲ್ಲಿದೆ ಬದುಕಿಲ್ಲ; ಕನಸುಗಳನ್ನು ಕಟ್ಟಿಕೊಂಡಾಗ ಮಾತ್ರ ಗುರಿ ಮುಟ್ಟುವ ದಾರಿ ಕಾಣುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ತಾವು ಕಾಣುವ ಕನಸಿನ ಬಗ್ಗೆ ಸ್ಪಷ್ಟತೆ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ನಾವಿರುವ ಸಂಕಷ್ಟದ ಪರಿಸ್ಥಿತಿಯಿಂದ ಬಹುಬೇಗ ಬಿಡುಗಡೆ ಹೊಂದಬೇಕು ಎಂಬ ಗುರಿ ನಮ್ಮ ಕನಸುಗಳ ಧ್ಯೇಯೋದ್ದೇಶವಾಗಿರಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಕನಸುಗಳು ಒಳ್ಳೆಯ ಉದ್ದೇಶದಿಂದ ಕೂಡಿದ್ದು, ನಿರಂತರ ಪರಿಶ್ರಮ ಇಲ್ಲದೇ ಹೋದರೆ ಅಂತಹ ಕನಸುಗಳಿಗೆ ಅರ್ಥವಿರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಬೇಕು. ಓದಿನ ವಿಚಾರದಲ್ಲಿ ಸ್ವಲ್ಪ ಹೊತ್ತಿನ ನಂತರ ಓದಿದರಾಯಿತು, ನಾಳೆ ಓದಿದರಾಯಿತು ಎಂಬ ಸೋಮಾರಿತನ ಬಿಡಬೇಕು. ಒಂದು ನಿಮಿಷವನ್ನೂ ವ್ಯರ್ಥ ಮಾಡದೇ ಓದಬೇಕು. ಗುರಿ ಮುಟ್ಟುವವರೆಗೂ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಲವು ವಿದ್ಯಾರ್ಥಿಗಳು ಮನೆಯಲ್ಲಿ ಬಡತನವಿದೆ, ಇಂಗ್ಲೀಷ್ ಬರುವುದಿಲ್ಲ, ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುವಷ್ಟು ಹಣವಿಲ್ಲ. ಓದುವುದಕ್ಕೆ ಸಮಯ ಸಿಗುತ್ತಿಲ್ಲ ಇತ್ಯಾದಿ ಕುಂಟು ನೆಪಗಳನ್ನು ಮುಂದೊಡ್ಡಿ ಓದುವುದನ್ನು ಮುಂದೂಡುತ್ತಾರೆ. ಹೀಗೆ ನೆಪಗಳನ್ನು ಹೇಳಿಕೊಂಡು ಕಾಲ ಕಳೆದರೆ ಜೀವನ ಪೂರ್ತಿ ಕಷ್ಟದಲ್ಲಿಯೇ ಬದುಕಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸರ್ಕಾರ ನೀಡುವ ಸೌಲಭ್ಯಗಳು, ಸಾರ್ವಜನಿಕ ಗ್ರಂಥಾಲಯಗಳನ್ನು ಸದುಪಯೋಗ ಪಡಿಸಿಕೊಂಡು ಓದಬೇಕು. ಸಮಸ್ಯಗಳನ್ನೇ ಸಾಧನೆಯ ಮೆಟ್ಟಿಲು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮೊಬೈಲ್ ಲೋಕ ವಿದ್ಯಾರ್ಥಿಗಳು ಮತ್ತು ಯುವಜನರನ್ನು ದಾರಿ ತಪ್ಪಿಸುತ್ತಿದೆ. ಸಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವುದರಿಂದ ಹಣ ಸಂಪಾದಿಸಬಹುದು, ಜೀವನದಲ್ಲಿ ಮುಂದೆ ಬರಬಹುದು ಎಂಬ ಭ್ರಮೆಯಲ್ಲಿ ಇಂದಿನ ಯುವಪೀಳಿಗೆ ಸಿಲುಕಿದ್ದಾರೆ. ರೀಲ್ಸ್‍ಗಳಿಗಾಗಿ ತಮ್ಮ ಶ್ರಮ ಮತ್ತು ಬುದ್ಧಿಶಕ್ತಿ ವ್ಯರ್ಥಮಾಡುತ್ತಿದ್ದಾರೆ. ಇಲ್ಲಸಲ್ಲದ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ಭವಿಷ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣ, ರೀಲ್ಸ್, ಅನಗತ್ಯ ಸುತ್ತಾಟ-ಅಲೆದಾಟಗಳಿಂದ ಹೊರಬರಬೇಕು. ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ತಮ್ಮ ಗಮನ ಕೇಂದ್ರೀಕರಿಸಬೇಕು. ಯಾರಲ್ಲಿ ಉತ್ತಮ ನಡತೆ, ಆರೋಗ್ಯ, ಶಿಕ್ಷಣ, ಗುರಿಯ ಬಗ್ಗೆ ಸ್ಪಷ್ಟತೆ ಮತ್ತು ಜ್ಞಾನ ಇರುತ್ತದೆಯೋ ಅವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ ಎಂದು ತಿಳಿಸಿದರು.
ಎಲ್ಲರಿಗೂ ಸಮಾನ ಅವಕಾಶಗಳಿವೆ. ಆದರೆ, ಯಾರು ಅವಕಾಶಗಳನ್ನು ಪಡೆಯುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡಿರುತ್ತಾರೋ ಅವರಿಗೆ ಅವಕಾಶಗಳು ದೊರೆಯುತ್ತವೆ. ಯಾರು ಯಾವ ಸಿದ್ಧತೆಯನ್ನೂ ಮಾಡಿಕೊಳ್ಳದೇ ಕಾಲ ಕಳೆಯುತ್ತಾರೋ ಅವರು ಅವಕಾಶದಿಂದ ವಂಚಿತರಾಗುತ್ತಾರೆ ಎಂದರು.
ಕೊಡಗು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗಳನ್ನು ಪಡೆದುಕೊಂಡರೆ ತಮ್ಮ ಕಷ್ಟಗಳ ಜೊತೆಗೆ ಸಮಾಜದ ಸಮಸ್ಯಗಳನ್ನೂ ಪರಿಹರಿಸಬಹುದು. ನಮ್ಮ ಸ್ಪಷ್ಟವಾದ ಗುರಿಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನೂ ಸುಧಾರಿಸಬಹುದು ಎಂದು ತಿಳಿಸಿದರು.
ಈಗಿನ ಯುವ ಪೀಳಿಗೆ ತುಂಬಾ ಬುದ್ಧಿವಂತರಾಗಿದ್ದಾರೆ. ಆದರೆ ಅವರಲ್ಲಿ ತಾಳ್ಮೆ ಮತ್ತು ಶ್ರಮ ಇರುವುದಿಲ್ಲ. ಒಳಿತು ಕೆಡುಕಿನ ಬಗ್ಗೆ ತಿಳಿದಿರುವುದಿಲ್ಲ. ಹಸಿವಿನ ಆಳದ ಅರಿವಿರುವುದಿಲ್ಲ. ಆದ್ದರಿಂದಲೇ ಅವರು ಪುಷ್ಪಾ ಚಿತ್ರದ ನಾಯಕ ನಟನನ್ನು ನೋಡಲು ಹೋಗಿ ಕಾಲ್ತುಳಿತಕ್ಕೆ ಸಿಲುಕಿದರು. ಹಾಗೇಯೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಕ್ರಿಕೆಟ್ ಆಟಗಾರರನ್ನು ನೋಡಲು ಹೋಗಿ ಕಾಲ್ತುಳಿತಕ್ಕೆ ಬಲಿಯಾದರು. ಯುವ ಪೀಳಿಗೆಯಲ್ಲಿ ಹಸಿವು-ಅಕ್ಷರದ ಅರಿವಿದ್ದರೆ ತಾವೇ ನಿಜವಾದ ಪ್ರಖ್ಯಾತ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕರಾಮುವಿ ಕುಲಪತಿ ಪೆÇ್ರ.ಶರಣಪ್ಪ ವಿ.ಹಲಸೆ, ಪರೀಕ್ಷಾಂಗ ಕುಲಸಚಿವ ಡಾ.ಆನಂದ್‍ಕುಮಾರ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.