ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ ಅಗತ್ಯ

ತುಮಕೂರು, ಜು. ೫- ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ಏಕಾಗ್ರತೆ ಬಹಳ ಮುಖ್ಯವಾದದ್ದು. ಸಂಸ್ಕೃತಿಯು ನಮ್ಮ ಜೀವನದ ವಿವಿಧ ಮಗ್ಗಲುಗಳಲ್ಲಿ ಪ್ರಭಾವ ಬೀರುತ್ತದೆ. ನಾವು ಹೇಗೆ ಬದುಕಬೇಕು, ಹೇಗೆ ವರ್ತಿಸಬೇಕು ಎಂಬುದನ್ನು ಸಂಸ್ಕೃತಿ ನಿರ್ಧರಿಸುತ್ತದೆ ಎಂದು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ ದಾಕ್ಷಾಯಣಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಸಂಸ್ಕೃತಿಯು ನಮ್ಮನ್ನು ಒಂದುಗೂಡಿಸುತ್ತದೆ. ನಮ್ಮಲ್ಲಿ ಐಕ್ಯತೆಯನ್ನು ಮೂಡಿಸುತ್ತದೆ ಎಂದು ವಿಶ್ಲೇಷಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮವು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮದ ಮೂಲಕ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಸಂಕಲ್ಪವನ್ನು ಮಾಡೋಣ. ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟಿರುವ ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.


ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.


ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ. ಬಿ. ಕರಿಯಣ್ಣ, ಪ್ರೊ. ಟಿ.ಎನ್. ಹರಿಪ್ರಸಾದ್, ಡಾ. ಸುದೀಪ್ ಕುಮಾರ್ ಆರ್., ಡಾ. ರವಿ ಸಿ.ಎಂ. ಮತ್ತಿತರರು ಭಾಗವಹಿಸಿದ್ದರು.