Home ಜಿಲ್ಲೆ ವಿಜಯನಗರ: ಶೇ.61 ರಷ್ಟು ಮಳೆ ಕೊರತೆ: ಪರ್ಯಾಯ ಬೆಳೆಗೆ ಸೂಚನೆ

ವಿಜಯನಗರ: ಶೇ.61 ರಷ್ಟು ಮಳೆ ಕೊರತೆ: ಪರ್ಯಾಯ ಬೆಳೆಗೆ ಸೂಚನೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜು.10 ಮುಂಗಾರು ಆರಂಭವಾಗಿ 40 ದಿನ ಕಳೆದರೂ ಜಿಲ್ಲಾದ್ಯಂತ ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಗಿಂತ ಶೇ.61 ರಷ್ಟು ಮಳೆ ಕಡಿಮೆಯಾಗಿದ್ದು, ಅದಕ್ಕಾಗಿ ರೈತರು ಪರ್ಯಾಯವಾಗಿ ಸಿರಿಧಾನ್ಯಗಳು ಹಾಗೂ ಅಲ್ಪ ಅವಧಿಯ ಬೆಳೆಗಳು ಬೆಳೆಯುವಂತೆ ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬಿತ್ತನೆ ಗುರಿ ಹೊಂದಿರುವ ಮಟ್ಟಕ್ಕಿಂತ ಕಡಿಮೆ ಬಿತ್ತನೆಯಾಗಿದ್ದು, ಪರ್ಯಾಯವಾಗಿ ಅಲ್ಪ ಅವಧಿಯ ಬೆಳೆಗಳು, ಬರ ನಿರೋಧಕ ತಳಿಗಳ ಬಿತ್ತನೆಯತ್ತ ಮುಖ ಮಾಡುವುದು ಅನಿವಾರ್ಯವಾಗಿದೆ. ಹವಾಮಾನ ವೈಪರಿತ್ಯ ಅಥವಾ ಮಳೆಯ ವಿಳಂಬದಂತಹ ಸಂದರ್ಭಗಳಲ್ಲಿ ರೈತರು ನಷ್ಟವನ್ನು ತಪ್ಪಿಸಲು ಪರ್ಯಾಯ ಕೃಷಿ ಪದ್ಧತಿಗಳನ್ನು ಕಾಲ ಕಾಲಕ್ಕೆ ಅಳವಡಿಸಿಕೊಳ್ಳಬೇಕು. ಸಕಾಲಕ್ಕೆ ಮಳೆಯಾಗದಿದ್ದಾಗ ಕಡಿಮೆ ಅವಧಿಯ ಬೆಳೆಗಳನ್ನು ಬಿತ್ತುವುದು ಮತ್ತು ಮಣ್ಣಿನ ತೇವಾಂಶ ಕಾಪಾಡಿಕೊಳ್ಳಲು ಬೆಳೆ ಸಾಲುಗಳ ಮಧ್ಯೆ ಒಣಗಿದ ಎಲೆ ಅಥವಾ ಕಳೆಯನ್ನು ಹೊದಿಕೆಯಾಗಿ ಬಳಸುವುದರಿಂದ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಈ ಮೂಲಕ ರೈತರು ಬೆಳೆಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬರ ನಿರೋಧಕ ಬೆಳೆ ಮತ್ತು ತಳಿಗಳನ್ನು, ಕಡಿಮೆ ಅವಧಿಯ ಬೆಳೆ ಮತ್ತು ತಳಿಗಳನ್ನು, ಉತ್ಪಾದನಾ ವೆಚ್ಚ ಕಡಿಮೆ ಇರುವ ಹಾಗೂ ರೋಗ ಮತ್ತು ಕೀಟ ನಿರೋಧಕ ತಳಿಗಳನ್ನು ಆಯ್ಕೆ ಮಾಡಬೇಕು.

ಬಿತ್ತನೆ ಸಮಯದಲ್ಲಿ ಬೀಜಗಳನ್ನು ನೆನೆಸಿ ಬಿತ್ತುವುದು, ಪೊಟ್ಯಾಶ್, ಕ್ಯಾಲ್ಸಿಯಂ ಕ್ಲೋರೈಡ್ ಅಥವಾ ಸುಣ್ಣದಿಂದ ಬೀಜೋಪಚಾರ ಮಾಡಿದ ಬೀಜಗಳನ್ನು ಬಿತ್ತಬೇಕು. ಮುಂಗಾರು ಮಳೆ ತಡವಾಗಿದ್ದರಿಂದ ಪರ್ಯಾಯವಾಗಿ ಜೋಳ, ಹಿಂಗಾರು ಜೋಳ ಮತ್ತು ಸೂರ್ಯಕಾಂತಿ ಹಾಗೂ ಸಜ್ಜೆ, ತೊಗರಿ ಬೆಳೆಯನ್ನು ವೈಜ್ಞಾನಿಕವಾಗಿ ಮಿಶ್ರ ಬೆಳೆಗಳನ್ನು ಬೆಳೆಯಬೇಕು. ರೈತರು ಭೂಮಿಯ ತೇವಾಂಶವನ್ನು ಕಾಪಾಡಲು ಸಾಲಿನಿಂದ ಸಾಲಿಗೆ ಅಂತರ ಹೆಚ್ಚಿಸಿ ನವಣೆ, ರಾಗಿ, ತೊಗರಿ ಅಲ್ಪ ಅವಧಿಯ ತಳಿಗಳನ್ನು ಬಿತ್ತುವುದರ ಮೂಲಕ ಅಂತರ ಬೇಸಾಯವನ್ನು ಅಳವಡಿಸಿಕೊಳ್ಳಬೇಕು ಜೊತೆಗೆ ಕಾವಲಿನ್ ದ್ರಾವಣ ಸಿಂಪಡಿಸುವುದು ಬರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಗತ್ಯ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಗೊಬ್ಬರದ ಯಾವುದೇ ಕೊರತೆಯಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆ ಆರಂಭವಾಗಿದೆ. ಬೆಳೆ ವಿಮೆ ಮಾಡಿಸಲು ಜು. 31 ರವರೆಗೆ ಅವಕಾಶವಿದ್ದು. ಸದರಿ ಯೋಜನೆಯಡಿ ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ಬೆಳೆ ಮಾಡಿಸುವ ಮೂಲಕ ಯೋಜನೆಯ ಸದುಪಯೋಗ ಪಡೆಯುವಂತೆ ತಿಳಿಸಿದ್ದಾರೆ.