
(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.23: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಲ್ಕುಂದೆಯ ಮುದೇನೂರು ಗ್ರಾಮದ ರಸ್ತೆಯ ಎಡಬದಿಯ ಮೌನೇಶ್ ಅವರ ಹೊಲದಲ್ಲಿ ಅಪರೂಪದ ಕಪ್ಪುಕಲೆಯ ಸೂರ್ಯಶಿಲ್ಪವೊಂದನ್ನು ಗ್ರಾಮದ ಹನುಮಂತಪ್ಪ, ಜಡೇಶ್, ಕುಬೇರಪ್ಪ ಅವರ ಸಹಕಾರದಿಂದ ಪತ್ತೆ ಮಾಡಲಾಗಿದೆ.
ಈ ಸೂರ್ಯನ ಶಿಲ್ಪವನ್ನು ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷ ಟಿ. ಎಚ್. ಎಂ. ಬಸವರಾಜ ಹಾಗೂ ವಿಜಯನಗರ ಸಂಶೋಧನ ತಿರುಗಾಟ ತಂಡದ ಸದಸ್ಯರು ಬೆಳಕಿಗೆ ತಂದಿದ್ದಾರೆ.
ಕಪ್ಪು ಶಿಲೆಯಲ್ಲಿ ಕೆತ್ತನೆ ಮಾಡಿದ ಸೂರ್ಯ ಶಿಲ್ಪವು ತುಂಬಾ ನುಣುಪಾಗಿದೆ. ಇದು ಪೂರ್ವ ದಿಕ್ಕಿಗೆ ಮುಖ ಮಾಡಿದೆ. ಈ ಶಿಲ್ಪವು ೫೧ ಸೆ.ಮೀ ಅಗಲ, ೮೩ ಸೆ.ಮೀ. ಎತ್ತರವಾಗಿದ್ದು, ಪಾದದ ಅಳತೆಯು ೧೩ ಸೆ.ಮೀ ಇದೆ. ತನ್ನ ಎರಡು ಕೈಯಲ್ಲಿ ಕಮಲ ಹಿಡಿದಿರುವಂತೆ ಕಾಣಿಸುತ್ತದೆ. ಈ ಶಿಲ್ಪದ ತಲೆಯ ಹಿಂಬದಿಗೆ ವೃತ್ತಾಕಾರದ ಪ್ರಭಾವಳಿಯು ಕಂಡುಬರುತ್ತದೆ. ಈ ಶಿಲ್ಪದ ಕೆತ್ತನೆಯ ಆಧಾರದ ಮೇಲೆ ೧೧ ನೇ ಶತಮಾನದ್ದೆಂದು ಗುರುತಿಸಬಹುದಾಗಿದೆ.
ಈ ಸೂರ್ಯ ಶಿಲ್ಪದ ಕಾಲುಗಳು ತುಂಡಾಗಿದ್ದು ಚರಿತ್ರೆಯನ್ನು ಕಟ್ಟಿಕೊಡುವ ಇಂತಹ ಶಿಲ್ಪಿಗಳು ಮುಂದಿನ ಪೀಳಿಗೆಗೆ ತಿಳಿಸಿಕೊಡಲು ರಕ್ಷಿಸಬೇಕಾಗಿದ ಕೆಲಸ ಆಗಬೇಕಾಗಿದೆ ಎಂದು ಟಿ ಎಚ್ ಎಂ ಬಸವರಾಜ್ ತಿಳಿಸಿದ್ದಾರೆ.
ವಿಜಯನಗರ ತಿರುಗಾಟ ಸಂಶೋಧನ ತಂಡದ ಸದಸ್ಯ ಡಾ. ಗೋವಿಂದಾವರು. ಬಲ್ಕುoದೆಯು ಐತಿಹಾಸಿಕವಾಗಿ, ಪೌರಾಣಿಕವಾಗಿಯೂ ಪ್ರಸಿದ್ದಿಯನ್ನು ಪಡೆದಿದೆ. ಬೇರೆಲ್ಲೂ ಇಲ್ಲದ ಬ್ರಹ್ಮನ ಶಿಲ್ಪವು ಬನ್ನಿಮಹಾಂಕಳಿ ದೇಗುಲದ ಎದುರಿಗೆ ಇದೆ.ಅಲ್ಲದೇ ಹಗರಿಯ ನದಿಯ ದಂಡೆಯ ಮೇಲೆ ದೇವಿವಿಗ್ರಹ, ನಾಗಶಿಲ್ಪ ಹಾಗೂ ತುಂಡಾದ ನಂದಿ ಮೂರ್ತಿಗಳಿವೆ.ಇಂತಹ ಅಪರೂಪದ ಶಿಲ್ಪಗಳನ್ನು ಸಂಬಂಧಪಟ್ಟ ಇಲಾಖೆಯು ಸಂರಕ್ಷಣೆ ಮಾಡಬೇಕಾಗಿದೆ ಎಂದಿದ್ದಾರೆ.


































