
ಸಂಜೆವಾಣಿ ವಾರ್ತೆ
ಹೊಸಪೇಟೆ.ಆ.13 ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ವಿಜಯನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರ್ನಾಟಕ ಬಂದ್ ಗೆ ವಿಜಯನಗರ ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳು ಕೇವಲ ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜನಜೀವನ ಸಾಮಾನ್ಯವಾಗಿದೆ.
ವಿಜಯನಗರ ಜಿಲ್ಲೆ ವ್ಯಾಪ್ತಿಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹಡಗಲಿ ಹಾಗೂ ಹರಪನಹಳ್ಳಿ ತಾಲೂಕುಗಳಲ್ಲಿ ಜನ ಜೀವನ ಎಂದಿನಂತಿದ್ದು. ಸಾರಿಗೆ ಬಸ್ ಗಳ ಸಂಚಾರ, ಆಟೋ, ಟ್ಯಾಕ್ಸಿಗಳ ಸಂಚಾರ ಎಂದಿನಂತಿದೆ. ಸರ್ಕಾರಿ ಕಛೇರಿಗಳು ಹಾಗೂ ಶಾಲಾ ಕಾಲೇಜುಗಳು ಎಂದಿನಂತೆ ಆರಂಭವಾಗಿವೆ. ಅಂಗಡಿ-ಮುಂಗಟ್ಟುಗಳು ಬೆಳಿಗ್ಗೆಯಿಂದ ಆರಂಭವಾಗಿದ್ದು. ವ್ಯಾಪಾರ ವಹಿವಾಟು ಎಂದಿನಂತಿದೆ. ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲಿ ವಾರದ ರಜೆ ಗುರುವಾರ ಆಗಿರುವುದರಿಂದ ವ್ಯಾಪಾರ ವಹಿವಾಡು ಮಂದಗತಿಯಲ್ಲಿತ್ತು. ಬಂದ್ ನ ಬಿಸಿ ಜಿಲ್ಲೆಗೆ ತಟ್ಟಿಲ್ಲ.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ಹೊಸಪೇಟೆ ಡಿವೈಎಸ್ಪಿ ಪಿ.ಮುರಳೀಧರ್ ನೇತೃತ್ವದಲ್ಲಿ ಸ್ಥಳೀಯ ಪೊಲೀಸರು ನಗರದ ಡಾ.ಪುನೀತ್ ರಾಜ್ ಕುಮಾರ್ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಎರ್ಪಡಿಸಿದ್ದರು.

































