ವಾಲ್ಮೀಕಿ ಮಹರ್ಷಿಗಳು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ: ಶಾಸಕ ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.08:
ಸಮುದಾಯಗಳ ಸಹಕಾರವಿಲ್ಲದೆ ಅಭಿವೃದ್ದಿ ಅಸಾಧ್ಯ. ಅಭಿವೃದ್ದಿಯ ದೃಷ್ಠಿಯಿಂದ ಸರ್ವ ಸಮುದಾಯಗಳು ಪಕ್ಷರಾಜಕಾರಣವನ್ನು ಬದಿಗೊತ್ತಿ ಸಂಘಟಿತರಾಗಬೇಕೆಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.


ಅವರು ಪಟ್ಟಣದ ಕೆ.ಪಿ.ಎಸ್ ಶಾಲೆಯ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ವಾಲ್ಮೀಕಿ ಮಹರ್ಷಿಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಸಮಸ್ತ ಭಾರತೀಯ ಸಂಸ್ಸೃತಿಯ ಪ್ರತಿನಿಧಿ. ರಾಮಾಯಣ ನಮ್ಮ ಬದುಕಿನ ಆದರ್ಶವಾಗಬೇಕೆಂದು ಹೇಳಿದ ಶಾಸಕ ಹೆಚ್.ಟಿ.ಮಂಜು ಅಭಿವೃದ್ದಿಯ ವಿಚಾರ ಬಂದಾಗ ಸಮುದಾಯದ ಮುಖಂಡರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಮುಂದೂಡಬೇಕು. ಶಾಸಕನಾದ ನಾನು ಎಲ್ಲಾ ಸಮುದಾಯಗಳನ್ನು ಸಮಾನವಾಗಿ ನೋಡುತ್ತಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ವಿದ್ಯಾವಂತರಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸುವ ಗುರಿಯೊಂದಿಗೆ ತಾಲೂಕಿಗೆ ಯಾವುದಾದರೊಂದು ಬೃಹತ್ ಕೈಗಾರಿಕೆಯನ್ನು ತರುವತ್ತ ಪ್ರಯತ್ನಿಸುತ್ತಿದ್ದೇನೆ. ಈ ಬಗ್ಗೆ ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವರೂ ಆದ ನಮ್ಮ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪ್ರಸ್ತಾಪಿಸಿದ್ದೇನೆ. ರಾಜ್ಯ ಸರ್ಕಾರ ಬೃಹತ್ ಕೈಗಾರಿಕೆಗೆ ಅಗತ್ಯವಾದ ಭೂಮಿ, ನೀರು ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಯಾವುದಾದರೊಂದು ಕೈಗಾರಿಕೆಯನ್ನು ನನ್ನ ತಾಲೂಕಿನಲ್ಲಿ ಸ್ಥಾಪಿಸುವತ್ತ ಕುಮಾರಣ್ಣ ಒಲವು ಹೊಂದಿದ್ದಾರೆ. ಬೃಹತ್ ಕೈಗಾರಿಕೆಗೆ ಅಗತ್ಯವಾದ ಭೂಮಿ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಮುಂದೆ ಈಗಾಗಲೇ ಪ್ರಸ್ತಾಪಿಸಿದ್ದೇನೆಂದರು. ತಾಲೂಕಿನ ಮುರುಕನಹಳ್ಳಿ, ಶೀಳನೆರೆಗಳಲ್ಲಿ ತೋಟಗಾರಿಕಾ ಫಾರಂಗಳಿದ್ದು ಇಲ್ಲಿ ಸಾಕಷ್ಟು ಭೂಮಿಯಿದೆ. ಇಲ್ಲಿ ಕೃಷಿ ಸಂಶೋಧನಾ ಕೇಂದ್ರವನ್ನು ತೆರೆಯುವಂತೆ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದ ಶಾಸಕ ಹೆಚ್.ಟಿ.ಮಂಜು ಬಹುತೇಕ ನಾಯಕ ಸಮುದಾಯವರೇ ವಾಸಿಸುತ್ತಿರುವ ತಾಲೂಕಿನ ಕುಗ್ರಾಮ ಪೂವನಹಳ್ಳಿ ಗ್ರಾಮವನ್ನು ಸಂಪೂರ್ಣ ಮಾದರಿ ಗ್ರಾಮವನ್ನಾಗಿ ಅಭಿವೃದ್ದಿಪಡಿಸಲು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಇದಕ್ಕೆ ಕಾರಣಕರ್ತರಾದ ಕೆಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಪ್ರಧಾನಿ ನರೇಂದ್ರಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕಾಗಿದೆ. ಪಟ್ಟಣದ ಟಿ.ಬಿ.ಬಡಾವಣೆಯಲ್ಲಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ, ಅದೇ ರೀತಿ ತಾಲೂಕಿನ ಅಕ್ಕಿಹೆಬ್ಬಾಳು ಮತ್ತು ಕುಪ್ಪಹಳ್ಳಿ ಗ್ರಾಮಗಳ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ಅನುದಾನದ ಕೊರತೆಯಿಂದ ಅಪೂರ್ಣವಾಗಿವೆ. ಇವುಗಳನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ತರಲು ಶ್ರಮಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ಎಲ್ಲರೂ ಒಗ್ಗೂಡಿ ದುಡಿಯೋಣ. ವಾಲ್ಮೀಕಿ ಮಹರ್ಷಿಗಳ ರಾಮರಾಜ್ಯ ನಿರ್ಮಾಣದ ದಾರಿಯಲ್ಲಿ ಎಲ್ಲರೂ ಸಾಗಬೇಕೆಂದರು.


ಪ್ರದಾನ ಭಾಷಣ ಮಾಡಿದ ಮಂಡ್ಯ ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಎಸ್.ಪ್ರೇಮಕುಮಾರ್ ಶಿಕ್ಷಣ ಮತ್ತು ಸಂಘಟನೆಯ ಮೂಲಕ ನಾವು ಅಭಿವೃದ್ದಿಯ ಪಥದಲ್ಲಿ ಸಾಗಬೇಕು. ವಾಲ್ಮೀಕಿ ಸಮುದಾಯ ಒಂದು ಪ್ರಭಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದರು. ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಅಸುರತ್ವ ಮತ್ತು ಸತ್ಯ ಎನ್ನುವ ಎರಡು ಗುಣಗಳಿವೆ. ನಮ್ಮೊಳಗಿನ ಅಸುರತ್ವ ನಾಶವಾಗಿ ಸತ್ಯ ಗೆಲ್ಲಬೇಕು. ರತ್ನಾಕರ ವಾಲ್ಮೀಕಿಯಾಗಿ ತಾನು ಪಡೆದ ಜ್ಞಾನವನ್ನು ರಾಮಾಯಣದ ಮೂಲಕ ಜಗತ್ತಿಗೆ ನೀಡಿದ್ದಾನೆ. ರಾಮಾಯಣ ಮಾನವೀಯ ಮೌಲ್ಯಗಳ ಪ್ರತಿನಿಧಿ. ನಾವಿಂದು ರಾಮರಾಜ್ಯದ ಪರಿಕಲ್ಪನೆಯಿಂದ ಹಿಂದೆ ಸರಿದಿದ್ದೇವೆ. ಪ್ರಜೆಗಳ ನಿಯಂತ್ರಣದಲ್ಲಿರಬೇಕಾದ ನಮ್ಮ ಸರ್ಕಾರಗಳು ಬಂಡವಾಳ ಶಾಹಿಗಳ ಹಿಡಿತಕ್ಕೆ ಒಳಗಾಗಿವೆ. ಶ್ರೀರಾಮನಂತೆ ಪ್ರಜಾಶಕ್ತಿಗೆ ಅಂಜಿ ನಡೆಯುವ ರಾಜಕೀಯ ಸಂಸ್ಕೃತಿಯ ಪುನರುತ್ತಾನಕ್ಕೆ ಜನತೆ ಮುಂದಾದಾಗ ಮಾತ್ರ ವಾಲ್ಮೀಕಿ ಕನಸಿನ ರಾಮರಾಜ್ಯ ನಿರ್ಮಾಣ ಸಾಧ್ಯ ಎಂದು ಪ್ರೇಮಕುಮಾರ್ ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಪಂಕಜಾಪ್ರಕಾಶ್,


ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಪುರಸಭೆಯ ಮಾಜಿ ಅಧ್ಯಕ್ಷರಾದ ಮಹದೇವಿ ನಂಜುಂಡ, ನಟರಾಜ್, ದಿಶಾ ಸಮಿತಿಯ ಸದಸ್ಯ ನರಸನಾಯಕ್, ಜೆಡಿಎಸ್ ಮುಖಂಡ ಅಕ್ಕಿಹೆಬ್ಬಾಳು ರಘು, ಜಿ.ಪಂ ಮಾಜಿ ಅಧ್ಯಕ್ಷೆ ಗಾಯಿತ್ರಿ ರೇವಣ್ಣ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಸಾರಂಗಿ ಜಯರಂಗ, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಬೊಮ್ಮೇನಹಳ್ಳಿ ಮಂಜುನಾಥ್ ಸೇರಿದಂತೆ ವಿವಿಧ ಮುಖಂಡರು, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದಿವಾಕರ್, ಪೆÇಲೀಸ್ ನಿರೀಕ್ಷಕಿ ಸುಮಾರಾಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.