Home ಜಿಲ್ಲೆ ಮಂಗಳೂರು ವಾರದೊಳಗೆ ಗುತ್ತಿಗೆದಾರರು-ಅಧಿಕಾರಿಗಳ ಸಭೆ; ಬೀಡಿ ಕಾರ್ಮಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ- ಅಶೋಕ್ ರೈ

ವಾರದೊಳಗೆ ಗುತ್ತಿಗೆದಾರರು-ಅಧಿಕಾರಿಗಳ ಸಭೆ; ಬೀಡಿ ಕಾರ್ಮಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ- ಅಶೋಕ್ ರೈ

ಪುತ್ತೂರು; ಬೀಡಿ ಕಾರ್ಮಿಕರಿಗೆ ಸಿಗಬೇಕಾದ ಮಜೂರಿ, ಬೋನಸ್ ಹಾಗೂ ರಜೆ ಸಂಬಳ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ದೂರಿನ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದ ಶಾಸಕ ಅಶೋಕ್ ರೈ ಅವರು ಸರ್ಕಾರ ನಿಗಧಿಪಡಿಸಿದ ರೀತಿಯಲ್ಲಿ ಕಾರ್ಮಿಕರಿಗೆ ಸೌಲಭ್ಯ ಸಿಗುವಂತೆ ವಾರದೊಳಗೆ ಬೀಡಿಗುತ್ತಿಗೆದಾರರ ಹಾಗೂ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕೆಯ್ಯೂರು ಸೇತುವೆ ಶಿಲಾನ್ಯಾಸಕ್ಕೆ ಹೋದ ಸಂದರ್ಭ ಮಹಿಳೆಯೊಬ್ಬರು ಶಾಸಕರೊಂದಿಗೆ ಬೀಡಿ ಬೋನಸ್ ಬಗ್ಗೆ ದೂರು ನೀಡಿದ್ದರು. ೫ ವರ್ಷದಿಂದ ಬೀಡಿ ಕಟ್ಟುತ್ತಿರುವ ನನಗೆ ಕೇವಲ ರೂ.೫೦೦ ಬೋನಸ್ ನೀಡಲಾಗಿದೆ. ಸರಿಯಾಗಿ ಮಜೂರಿ ನೀಡುತ್ತಿಲ್ಲ ಎಂದು ತಿಳಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕರು ನೀಡಿದ್ದರು. ಈ ವಿಚಾರದ ಕುರಿತು ಗಮನ ಹರಿಸಿದ ಶಾಸಕರಿಗೆ ಇನ್ನೂ ಹಲವು ಕಡೆಗಳಲ್ಲಿ ಇಂತಹುದೇ ಸಮಸ್ಯೆ ಕಂಡುಬಂದಿದೆ. ಬೀಡಿ ಗುತ್ತಿಗೆದಾರರು ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ಮಜೂರಿ ಮತ್ತು ಬೋನಸ್ ನೀಡುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ಅವರನ್ನು ಕಚೇರಿಗೆ ಕರೆಸಿಕೊಂಡು ಕಾರ್ಮಿಕರಿಗೆ ಸಿಗಬೇಕಾದ ಬೀಡಿ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಬೀಡಿ ಕಾರ್ಮಿಕರು ಅತ್ಯಂತ ಬಡವರ್ಗಕ್ಕೆ ಸೇರಿದವರು. ಹಗಲು ರಾತ್ರಿ ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಅಂತಹ ಕುಟುಂಬಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಸರ್ಕಾರ ನಿಗಧಿ ಪಡಿಸಿದ ರೀತಿಯಲ್ಲಿಯೇ ಬೀಡಿ ಕಾರ್ಮಿಕರಿಗೆ ರಜೆ ಸಂಬಳ, ಮಜೂರಿ ಹಾಗೂ ಬೋನಸ್ ನೀಡಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ೨೪೦ ಸಬ್ ಬೀಡಿ ಗುತ್ತಿಗೆದಾರರಿದ್ದಾರೆ, ೧೪ ಬೀಡಿ ತಯಾರಿಕಾ ಸಂಸ್ಥೆಗಳಿವೆ. ಬೀಡಿತಯಾರಿಕಾ ಸಂಸ್ಥೆಗಳೇ ಮಜೂರಿ, ಬೋನಸ್, ರಜೆ ಸಂಬಳವನ್ನು ನಿಗಧಿಮಾಡುತ್ತವೆ. ಈ ಗುತ್ತಿಗೆದಾರರನ್ನು ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ. ಇಲ್ಲಿ ಯಾರಿಗೂ ಅನ್ಯಾಯ ಮಾಡುವ ವಿಚಾರವಿಲ್ಲ ಎಂದು ಶಾಸಕರು ಹೇಳಿದರು. ಸಭೆಯಲ್ಲಿ ಕಟ್ಟಡ ಕಾರ್ಮಿಕ ಕಾರ್ಯವಾಹಕ ರಮೇಶ್ ಉಪಸ್ಥಿತರಿದ್ದರು.