ವರ್ಷವಿಡೀ ಖರೀದಿ ಕೇಂದ್ರ ತೆರೆಯಿರಿ: ಕೋಡಿಹಳ್ಳಿ

ಸಂಜೆವಾಣಿ ವಾರ್ತೆ

ಹೊಸಪೇಟೆ, ಡಿ26: ರೈತರ ಬೆಳೆಗಳನ್ನು ಸರ್ಕಾರ ವರ್ಷದ 365 ದಿನವೂ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರಗಳನ್ನು ಆರಂಭಿಸಬೇಕು. ಕೃಷಿ ತಜ್ಞ ಎಂ.ಎಸ್.ಸ್ವಾಮಿನಾಥನ್ ಅವರ ವರದಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರುವ ಮೂಲಕ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಒದಗಿಸಬೇಕು ಎಂದು  ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ಹೊಸಪೇಟೆಯ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ಅವರು ದಶಕಗಳ ಕಾಲ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ, ದೇಶಾದ್ಯಂತ ಸಂಚರಿಸಿ, ರೈತರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಮಹತ್ವದ ಶಿಫಾರಸ್ಸುಗಳನ್ನು ಮಾಡಿದ್ದಾರೆ. ರೈತರು ಬೆಳೆಯುವ ಬೆಳೆಗೆ ನಿಜವಾಗಿ ತಗಲುವ ವೆಚ್ಚಕ್ಕೆ ಶೇ.50ರಷ್ಟು ಮೊತ್ತವನ್ನು ಸೇರಿಸಿ (ಸಿ2 + 50) ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಬಿತ್ತನೆ ಹಾಗೂ ಬೆಳೆ ನಿರ್ವಹಣೆಗೆ ಮಾಡಿದ ವೆಚ್ಚ ಸರಿದೂಗಿಸಿ, ಕೊಂಚ ಲಾಭವೂ ಅನ್ನದಾತನ ಕೈಹಿಡಯಲಿದೆ. ಆದರೆ, ಅದನ್ನು ಜಾರಿಗೆ ತರಬೇಕಿರುವ ಆಳುವ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಘೋಷಣೆಯಾಗುತ್ತಿದ್ದಂತೆ ಮುಕ್ತ ಮಾರುಕಟ್ಟೆಯಲ್ಲಿ ಪಾತಾಳಕ್ಕೆ ಕುಸಿದಿದ್ದ ಬೆಲೆಗಳು ಚೇತರಿಸಿಕೊಳ್ಳುತ್ತವೆ. ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಕನಿಷ್ಠ ಬೆಂಬಲ ಬೆಲೆ ಹಾಗೂ ಕಬ್ಬು ಮತ್ತಿತರೆ ವಾಣಿಜ್ಯ ಬೆಳೆಗಳಿಗೆ ಘೋಷಿಸುವ ಎಫ್‍ಆರ್‍ಪಿಯನ್ನು ವೇತನ ಆಯೋಗದ ಮಾದರಿಯಲ್ಲಿ ಕೇಂದ್ರ ಸರ್ಕಾರ ಪ್ರತೀ ವರ್ಷ ಪರಿಷ್ಕರಿಸಬೇಕು. ಎಲ್ಲ ಜಿಲ್ಲೆಯ ಎಪಿಎಂಸಿಗಳಲ್ಲಿ ವರ್ಷವಿಡೀ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಅದಕ್ಕಾಗಿ ಕನಿಷ್ಠ 10 ಸಾವಿರ ಕೋಟಿ ರೂ. ಆವರ್ತ ನಿಧಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಪವರ್ ಪಾಲಿಟಿಕ್ಸ್‍ಗೆ ಮಣೆ ಹಾಕದಿರಿ:

ರೈತರ ಹೆಸರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಹಿಡಿದು ಹಿಂದಿನ ಸಿಎಂ ಸಿದ್ದರಾಮಯ್ಯ ವರೆಗೆ ಯಾವೊಬ್ಬ ನಾಯಕನೂ ರೈತರ ಪರ ಗಟ್ಟಿ ನಿರ್ಧಾರಗಳನ್ನು ಕೈಗೊಂಡಿಲ್ಲ. ರೈತರ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರು ಕಾಂಗ್ರಸ್ ಬೆಂಬಲದೊಂದಿಗೆ ವಿಧಾನಸಭೆ ಪ್ರವೇಶಿಸಿದ್ದರಿಂದ ರೈತರ ಪರ ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ರೈತರ ಮುಖಂಡರು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದರಿದಂದ ನಿಜವಾದ ರೈತರಿಗೆ ನ್ಯಾಯದೊರಕದು. ಈ ಬಗ್ಗೆ ಗಂಭೀರ ಚಿಂತನೆಯಾಗಬೇಕು ಎಂದರು.

ಗೋಷ್ಠಿಯಲ್ಲಿ ರೈತ ಮುಖಂಡ ಖಾಜಾ ಹುಸೇನ್ ನಿಯಾಜಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ್, ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಮುಖಂಡರಾದ ಆರ್.ಎಲ್.ತಾಯಪ್ಪ, ಹನುಮಂತಪ್ಪ ಹೊಳೆಯಾಚಿ, ಜಡಿಯಪ್ಪ ಉಪಸ್ಥಿತರಿದ್ದರು.

ಸ್ಥಳೀಯ ಬೇಡಿಕೆಗಳಾದ ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಸಮಸ್ಯೆ, ಹೊಸಪೇಟೆ ಮತ್ತು ಕಂಪ್ಲಿಯ ಸಕ್ಕರೆ ಕಾರ್ಖಾನೆಗಳು ಪುನರ್ ಆರಂಭದ ಬಗ್ಗೆ ಈಗಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದೇನೆ. ಮುಂದಿನ ದಿನಗಳಲ್ಲಿ ಚಳವಳಿಯನ್ನೂ ರೂಪಿಸಲಾಗುವುದು.

-ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ.