ವರುಣನಿಂದ ‘ಭರ್ಜರಿ’ ಆರಂಭ..

oplus_2

ಮೆಸ್ಕಾಂನಿಂದ ಗ್ರಾಮೀಣ ಜನತೆಗೆ ಕತ್ತಲಭಾಗ್ಯ..!
ಪುತ್ತೂರು; ಪತ್ತನಾಜೆಯ ದಿನದಿಂದಲೇ ಈ ಬಾರಿ ಮಳೆರಾಯ ತನ್ನ ಆರಂಭವನ್ನೇ ಭರ್ಜರಿಯಾಗಿ ಪ್ರಾರಂಭಿಸಿದ್ದಾನೆ. ಕಳೆದ ೨೪ ಗಂಟೆಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದ ತೋಡು, ಹಳ್ಳಗಳು ತುಂಬಿ ಹರಿಯುತ್ತಿದೆ. ಪುತ್ತೂರು ನಗರ ವ್ಯಾಪ್ತಿಯಲ್ಲಿ ರಸ್ತೆಗಳೇ ತೋಡುಗಳಾಗಿ ಪರಿವರ್ತಿತವಾಗಿದೆ. ಚರಂಡಿಯಲ್ಲಿ ಮಳೆ ನೀರು ಸಮರ್ಪಕವಾಗಿ ಹರಿಯದ ಕಾರಣ ಕೃತಕ ನೆರೆ ಭೀತಿ ಜನತೆಯಲ್ಲಿ ಉಂಟಾಗಿದೆ. ಮುಂಗಾರು ಪೂರ್ವ ಮಳೆಯೂ ಸಾಕಷ್ಟು ಸುರಿದ ಪರಿಣಾಮ ಇದೀಗ ಆರಂಭಗೊಂಡ ಮುಂಗಾರು ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ನಿಟ್ಟಿನಲ್ಲಿ ಸುರಿಯುತ್ತಿದೆ.
ಉಪ್ಪಿನಂಗಡಿಯಲ್ಲಿ ಸಂಕಷ್ಟ..
ಅಬ್ಬರದಿಂದ ಸುರಿಯುತ್ತಿರುವ ಗಾಳಿ ಮಳೆಗೆ ಪುತ್ತೂರು ನಗರಸಭೆಯ ಆವರಣಗೋಡೆ ಕುಸಿದು ಬಿದ್ದಿದೆ. ಈ ಭಾಗದಲ್ಲಿ ನಿಲ್ಲಿಸಲಾಗಿದ್ದ ಮೂರು ರಿಕ್ಷಾಗಳು ಜಖಂಗೊಂಡಿವೆ. ನಗರದ ದರ್ಬೆಯ ಅಂಕಲ್ ಸ್ವೀಟ್ ಬಳಿಯಲ್ಲಿ ಕೃತಕ ನೆರೆ ಉಂಟಾಗಿ ಪಕ್ಕದ ಮನೆಯಂಗಳಕ್ಕೆ ನೀರು ನುಗ್ಗಿದೆ. ಇಂದಿರಾ ಕ್ಯಾಂಟೀನ್ ರಸ್ತೆಯಲ್ಲಿರುವ ನಗರಸಭಾ ಸಮುದಾಯ ಭವನದ ಕಂಪೌಂಡ್ ಕೂಡ ಕುಸಿದಿದೆ. ಸಮುದಾಯ ಭವನದಲ್ಲಿ ಹಿರಿಯ ನಾಗರೀಕರ ಸಂಘದ ಕಚೇರಿಯೂ ಇದ್ದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ.
ಬಪ್ಪಳಿಗೆ ಯಾಕೂಬ್ ಖಾನ್ ಅವರ ಮನೆಯಿಂದ ಹಾದುಹೋಗುವ ರಸ್ತೆಯ ಬದಿಯು ಮಳೆಯಿಂದಾಗಿ ಸಂಪೂರ್ಣವಾಗಿ ಮಣ್ಣು ಕುಸಿತ ಉಂಟಾಗಿದ್ದು, ಸಂಚಾರಕ್ಕೆ ಅಪಾಯಕಾರಿಯಾಗಿದೆ. ಇಲ್ಲಿ ರಸ್ತೆ ಬದಿ ತಡೆಗೋಡೆ ಕುಸಿತ ಉಂಟಾಗಿದ್ದು, ರಸ್ತೆಯೂ ಕುಸಿಯುವ ಭೀತಿ ಎದುರಾಗಿದೆ. ವಿವಿಧ ಭಾಗದಲ್ಲಿ ನಡೆದ ಘಟನಾ ಸ್ಥಳಗಳಿಗೆ ಶಾಸಕ ಅಶೋಕ್ ರೈ ಭೇಟಿ ನೀಡಿದರು.
ಪುತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆಯ ಹಲವು ಕಡೆಗಳಲ್ಲಿ ಚರಂಡಿ ದುರಸ್ಥಿ ನಡೆಸದ ಕಾರಣ ಮಳೆನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು, ವಾಹನ ಸವಾರರಿಗೆ ಸಂಕಷ್ಟ ಉಂಟು ಮಾಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಉಪ್ಪಿನಂಗಡಿ ಹಳೇಗೇಟಿನಿಂದ ಹಿಡಿದು ಬೈಪಾಸ್ ರಸ್ತೆಯ ಸೇತುವೆ ತನಕದ ನಾದುರಸ್ಥಿ ರಸ್ತೆ ‘ಕೆಸರುಗದ್ದೆ’ಯಾಗಿ ಬದಲಾಗಿದೆ. ಹೆದ್ದಾರಿ ಕೆಲಸ ಕುಂಟುತ್ತಾ ಸಾಗುತ್ತಿರುವುದರಿಂದ ಇಲ್ಲಿನ ಅವ್ಯವಸ್ಥೆಯಲ್ಲಿ ವಾಹನ ಸಂಚಾರ ನಡೆಸುವುದೇ ಸವಾಲು ಎನಿಸಿಕೊಳ್ಳುತ್ತಿದೆ.
‘ಕತ್ತಲಭಾಗ್ಯ ನೀಡಿದ ಮೆಸ್ಕಾಂ
ಕಳೆದ ಎರಡು ದಿನಗಳಿಂದ ಪುತ್ತೂರು ಮೆಸ್ಕಾಂ ಇಲಾಖೆಯ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ಜನತೆಗೆ ಇಲಾಖೆಯಿಂದ ‘ಕತ್ತಲಭಾಗ್ಯ ದೊರಕಿದೆ. ಮಳೆಗಾಲದ ಆರಂಭಕ್ಕೆ ಮೊದಲೇ ಮಾನ್ಸೂನ್ ತಂಡಗಳ ಮೂಲಕ ಪೂರ್ವ ತಯಾರಿ ನಡೆಸಲು ಸಾಕಷ್ಟು ಅವಕಾಶ ಇದ್ದರೂ ಮೆಸ್ಕಾಂ ಇಲಾಖೆಯ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ ಎಂಬುವುದನ್ನು ಮಳೆರಾಯ ಸಾಬೀತು ಪಡಿಸಿದ್ದಾನೆ. ಕಳೆದ ಎರಡು ದಿನಗಳಿಂದ ಬಹುತೇಕ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ವಿದ್ಯುತ್ ಬಂದರೂ ಕೇವಲ ೫ ನಿಮಿಷ ಮಾತ್ರ ಇದ್ದು ಬಳಿಕ ನಾಪತ್ತೆಯಾಗುತ್ತಿತ್ತು. ಮೆಸ್ಕಾಂ ಇಲಾಖೆಯ ಲೈನ್‌ಮ್ಯಾನ್ ಸಹಿತ ಅಧಿಕಾರಿಗಳ ಫೋನ್ ನಾಟ್‌ರೀಚೇಬಲ್..
ಮೆಸ್ಕಾಂ ಅಧಿಕಾರಿಗಳಿಗೆ ರೈ ಖಡಕ್ ವಾರ್ನಿಂಗ್..!
ಜನತೆಯ ಮೂಲಭೂತ ಸೌಕರ್ಯವಾದ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸಿ.. ನಾನೇ ‘ಫೀಲ್ಡ್’ಗೆ ಬರುವ ಹಾಗೆ ಮಾಡಬೇಡಿ ಎಂದು ಶಾಸಕ ಅಶೋಕ್ ರೈ ಅವರು ಪುತ್ತೂರು ಉಪವಿಭಾಗದ ಮೆಸ್ಕಾಂ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮರ ಬಿದ್ದಿದೆ. ಕಂಬ ತುಂಡಾಗಿದೆ. ಲೈನ್ ಮ್ಯಾನ್ ಗಳಿಲ್ಲ ಎಂಬ ಸಬೂಬುಗಳು ಬೇಡ. ಮಳೆಗಾಲದ ಮೊದಲು ಪೂರ್ವ ವ್ಯವಸ್ಥೆಗೆ ಸಾಕಷ್ಟು ಸಮಯ ಇತ್ತು. ವ್ಯವಸ್ಥೆಗಳನ್ನೂ ನೀಡಲಾಗಿದೆ. ಈ ಬಗ್ಗೆ ಸಂಪೂರ್ಣ ತಯಾರಿಯಾಗಿರಬೇಕು ಎಂಬ ಸೂಚನೆ ನೀಡಿದ್ದೇನೆ. ವಿದ್ಯುತ್ ಸಮಸ್ಯೆ ಆದ ತಕ್ಷಣ ಸ್ಥಳಕ್ಕೆ ಹೋಗಿ ಅವ್ಯವಸ್ಥೆ ಸರಿಪಡಿಸಿ. ಒಂದು ಕಂಬ ಹಾಕಲು ನಿಮಗೆ ಮೂರು ದಿನ ಬೇಕಾ ಎಂದು ಗರಂ ಆಗಿಯೇ ಪ್ರಶ್ನಿಸಿರುವ ಶಾಸಕರು ಜನರಿಗೆ ತೊಂದರೆಯಾದರೆ ನಾನು ಸುಮ್ಮನಿರುವುದಿಲ್ಲ ಎಂದು ಖಾರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಎಲ್ಲಾ ಅಧಿಕಾರಿಗಳೂ ಜಾಗೃತರಾಗಿ..
ಕಳೆದ ಎರಡು ದಿನಗಳಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಘಟನೆಗಳು ನಡೆದಿವೆ. ಈ ಬಗ್ಗೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳೂ ಜಾಗೃತರಾಗುವಂತೆ ಶಾಸಕರು ಸೂಚನೆ ನೀಡಿದ್ದಾರೆ. ಮಳೆ ವಿಪರೀತವಾಗಿ ಸುರಿಯುತ್ತಿದೆ. ಗಾಳಿಯೂ ಇರುವ ಕಾರಣ ಕೆಲ ಕಡೆಗಳಲ್ಲಿ ಹಾನಿ ಉಂಟಾಗಬಹುದಾದ ಸಾಧ್ಯತೆ ಇದೆ. ಎಲ್ಲೆಲ್ಲಿ ಸಮಸ್ಯೆ ಉಂಟಾಗಬಹುದು ಎಂಬುವುದನ್ನು ಗಮನಿಸಬೇಕು. ಯಾವುದೇ ನಿರ್ಲಕ್ಷ್ಯ ಮಾಡಬೇಡಿ. ಘಟನಾ ಸ್ಥಳಗಳಿಗೆ ತಕ್ಷಣ ಭೇಟಿ ಕೊಡಿ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸಿ ಎಂದು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಮಟ್ಟದ ಅಧಿಕಾಇಗಳಿಗೆ ಅವರು ಸೂಚನೆ ನೀಡಿದ್ದಾರೆ.