Home ಜಿಲ್ಲೆ ವಚನಗಳು ಜನಸಾಮಾನ್ಯರ ದ್ವನಿಯಾಗಿವೆ”- ಎರಿಸ್ವಾಮಿ ಅಭಿಮತ.

ವಚನಗಳು ಜನಸಾಮಾನ್ಯರ ದ್ವನಿಯಾಗಿವೆ”- ಎರಿಸ್ವಾಮಿ ಅಭಿಮತ.

ಸಂಜೆವಾಣಿ ವಾರ್ತೆ

ಬಳ್ಳಾರಿ, ಆ.29: ಮೊದಲು ಸಾಹಿತ್ಯವು ಬಹುಕಾಲ ಅರಮನೆ ಮತ್ತು ಪಂಡಿತರ ವಲಯಕ್ಕೆ ಸೀಮಿತವಾಗಿತ್ತು. 12ನೇ ಶತಮಾನದ ವಚನಗಳು ಜನಸಾಮಾನ್ಯರ ಧ್ವನಿಯಾಗಿ ಜನರ ಮೌಡ್ಯತೆಯನ್ನು ತಿದ್ದುವಲ್ಲಿ  ವಚನಗಳು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿವೆ. ಸರಳ ನೇರ ನುಡಿಗಳನ್ನು ವಚನದಲ್ಲಿ ಕಾಣುತ್ತೇವೆ ಎಂದು ಎರ್ರಿಸ್ವಾಮಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯದ ಇತಿಹಾಸದಲ್ಲಿ 12ನೇ ಶತಮಾನವು ಒಂದು ಮಹತ್ವದ ತಿರುವಿನ ಕಾಲ ಈ ಕಾಲದಲ್ಲಿ ಬಸವಣ್ಣ, ಅಲ್ಲಮ, ಅಕ್ಕ, ಸಿದ್ದರಾಮ ಅನೇಕ ಶಿವಶರಣರು ತಮ್ಮ ಅನುಭವದ ಚಿಂತನೆಗಳನ್ನು ಸಾಮಾಜಿಕ ಕಳಕಳಿಯನ್ನು ಸರಳವಾದ ಕನ್ನಡದಲ್ಲಿ ವ್ಯಕ್ತಪಡಿಸಿದ ಸಾಹಿತ್ಯ ವಚನ ಸಾಹಿತ್ಯವಾಗಿದೆ.

 ವಚನಗಳು ಜಾತಿ ವರ್ಗ ಮೀರಿ ಮೇಲು- ಕೀಳು ಭಾವನೆಗಳನ್ನು ಪ್ರಶ್ನಿಸಿ ಸಮಾನತೆಯ ಸೇತುವೆಯನ್ನು ನಿರ್ಮಿಸಿದ ಸಾಹಿತ್ಯ ವಚನ ಸಾಹಿತ್ಯ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ತಾಲೂಕು ಘಟಕವು ದಿನಾಂಕ 28.08.2026ರಂದು ಬಳ್ಳಾರಿಯ ಸರ್ಕಾರಿ ಮಾಜಿ ಪುರಸಭೆ ಪದವಿಪೂರ್ವ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಶೈವ ಮಹಾವಿದ್ಯಾಲಯದ ನಿವೃತ್ತ ಗ್ರಂಥಪಾಲಕರಾದ ಡಾ. ಬಸವರಾಜ್ ಗದಗಿನ ತಮ್ಮ ಉದ್ಘಾಟನಾ ನುಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಡಿ ಭಾಗಗಳಲ್ಲಿ ಕನ್ನಡ ಜಾಗೃತಿ ಮೂಡಿಸುವುದರ ಜೊತೆಗೆ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ ಪರಿಷತ್ತು ಸೇವಾ ಮನೋಭಾವವನ್ನು ಹೊಂದಿದ ಸಂಸ್ಥೆಯಾಗಿ ಹಲವಾರು ದತ್ತಿ ಗಳನ್ನು ಸಂಗ್ರಹಿಸಿ ದಾನಿಗಳ ಆಶಯದಂತೆ ದತ್ತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆ ಎಲ್ಲಾ ಜಿಲ್ಲೆಗಿಂತ ಹೆಚ್ಚು ದತ್ತಿ ಸಂಗ್ರಹಿಸಿದ ಕೀರ್ತಿ ಬಳ್ಳಾರಿಗೆ ಸಲ್ಲುತ್ತದೆ ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ನುಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕುಮಾರಿ ಗುಲ್ಜರ್ ಪ್ರಾರ್ಥನೆಯನ್ನು ನೆರೆವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ. ವಿ. ರವರು ಗಣ್ಯಮಾನ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯನ್ನು ನುಡಿದರು.

 ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಳ್ಳಾರಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ  ಬಿ.ಪಿ. ಕಲ್ಲಪ್ಪ ರವರು ವಚನಗಳು ಎಲ್ಲಾ ವರ್ಗದ ಜನರಿಗೆ ದಾರಿದೀಪವಾಗಿವೆ. ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ವಚನಗಳು ತಮ್ಮ ಬದುಕನ್ನು ಸರಿಪಡಿಸಿಕೊಳ್ಳುವಲ್ಲಿ ಸಾಕ್ಷಿಯಾಗಿವೆ ಎಂದು ತಿಳಿಸಿದರು.  ಶ್ರೀಮತಿ ಬಿ. ನಾಗಲಿಂಗಮ್ಮ, ಉಪಸ್ಥಿತರಿದ್ದರು. ಅತಿಥಿಗಳಾದ ಶ್ರೀ ಟಿ ತಿಮ್ಮಪ್ಪ ರವರು ವಚನ ಗಾಯನ ಮಾಡಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಮಾಜಿ ಪುರಸಭೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ. ಸುಂಕಪ್ಪ ರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ವಚನಕಾರರು ತಮ್ಮ ವಚನಗಳ ಮೂಲಕ ಹೊಸ ಚಿಂತನೆ ಹೊಸ ಭಾಷಾ ಅಭಿ ವ್ಯಕ್ತಿತ್ವ ಮತ್ತು ಹೊಸ ಸಾಮಾಜಿಕ ದೃಷ್ಟಿಕೋನ ನೀಡಿದ ಚಿಂತಕರಾಗಿದ್ದಾರೆ ವಚನ ಸಾಹಿತ್ಯ ಸಮಾನತೆ ಮತ್ತು ಮಾನವೀಯತೆಯ ಜೀವನದ ಆದರ್ಶವೂ ಆಗಿದೆ  ಎಂದು ತಿಳಿಸಿದರು.

 ಈ ಕಾರ್ಯಕ್ರಮದಲ್ಲಿ ಕಾಲೇಜಿನ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಕ್ಷಿಯಾದರು ಕಾರ್ಯಕ್ರಮದ ಕೊನೆಗೆ ಗಣ್ಯಮಾನ್ಯರನ್ನು ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಮಹಿಳಾ ಸದಸ್ಯರಾದ ಶ್ರೀಮತಿ ಭಾಗ್ಯಲಕ್ಷ್ಮಿ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.