
ನವದೆಹಲಿ,ಡಿ.೮- ವಂದೇ ಮಾತರಂ ಒಂದು ಮಂತ್ರ, ಘೋಷಣೆಯಾಗಿದ್ದು ಸ್ವಾತಂತ್ರ್ಯ ಚಳವಳಿಗೆ ಶಕ್ತಿ, ಸ್ಫೂರ್ತಿ ಮತ್ತು ತ್ಯಾಗ ಮತ್ತು ಪ್ರಾಯಶ್ಚಿತ್ತದ ಮಾರ್ಗವನ್ನು ತೋರಿಸಿದ ಶಕ್ತಿ ಗೀತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಂದೇ ಮಾತರಂ ೫೦ ವರ್ಷಗಳನ್ನು ಪೂರೈಸಿದಾಗ, ಭಾರತ ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ವಂದೇ ಮಾತರಂ ೧೦೦ ವರ್ಷಗಳನ್ನು ಪೂರೈಸಿದಾಗ, ಭಾರತ ತುರ್ತು ಪರಿಸ್ಥಿತಿಯ ಹಿಡಿತದಲ್ಲಿತ್ತು… ಆ ಸಮಯದಲ್ಲಿ, ದೇಶಭಕ್ತರನ್ನು ಜೈಲಿನಲ್ಲಿರಿಸಲಾಯಿತು ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿದ ಹಾಡು, ದುರದೃಷ್ಟವಶಾತ್, ಭಾರತ ಕರಾಳ ಯುಗವನ್ನು ವೀಕ್ಷಿಸುತ್ತಿತ್ತು ಎಂದು ಹೇಳಿದ್ದಾರೆ.
ವಂದೇ ಮಾತರಂ ಗೀತೆಯ ೧೫೦ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ವಿಶೇಷ ಚರ್ಚೆ ಆರಂಭಿಸಿ ಮಾತನಾಡಿದ ಪ್ರಧಾನಿ ವಂದೇ ಮಾತರಂನ ೧೫೦ ವರ್ಷಗಳಿಗೆ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ವಿಷಯ. ಐತಿಹಾಸಿಕ ಕ್ಷಣ. ಅನೇಕ ಐತಿಹಾಸಿಕ ಘಟನೆಗಳನ್ನು ಮೈಲಿಗಲ್ಲುಗಳಾಗಿ ಆಚರಿಸಲಾಗುತ್ತಿರುವ ಅವಧಿ ಇದು ಇತ್ತೀಚೆಗೆ ನಮ್ಮ ಸಂವಿಧಾನದ ೭೫ ವರ್ಷಗಳನ್ನು ಆಚರಿಸಿದ್ದೇವೆ ಎಂದು ತಿಳಿಸಿದ್ದಾರೆ.
ದೇಶ ಸರ್ದಾರ್ ಪಟೇಲ್ ಮತ್ತು ಬಿರ್ಸಾ ಮುಂಡಾ ಅವರ ೧೫೦ ನೇ ಜನ್ಮ ದಿನಾಚರಣೆ ಆಚರಿಸುತ್ತಿದೆ. ಗುರು ತೇಜ್ ಬಹದ್ದೂರ್ ಜಿ ಅವರ ೩೫೦ ನೇ ಹುತಾತ್ಮ ದಿನ ಸಹ ಆಚರಿಸುತ್ತಿದ್ದೇವೆ. ಈಗ ನಾವು ವಂದೇ ಮಾತರಂನ ೧೫೦ ವರ್ಷಗಳನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ವಂದೇ ಮಾತರಂನ ೧೫೦ ವರ್ಷಗಳು ಆ ಹೆಮ್ಮೆಯನ್ನು ಮತ್ತು ನಮ್ಮ ಹಿಂದಿನ ಆ ಮಹಾನ್ ಭಾಗವನ್ನು ಪುನಃಸ್ಥಾಪಿಸಲು ಒಂದು ಅವಕಾಶವಾಗಿದೆ… ಈ ಹಾಡು ೧೯೪೭ ರಲ್ಲಿ ಸ್ವಾತಂತ್ರ್ಯವನ್ನು ಪಡೆಯಲು ನಮಗೆ ಸ್ಫೂರ್ತಿ ನೀಡಿತು ಎಂದು ಹೇಳಿದರು.
ವಂದೇ ಮಾತರಂ ಗೀತೆಯ ಋಣವನ್ನು ಸಾಮೂಹಿಕವಾಗಿ ಶ್ಲಾಘಿಸಲು ಮತ್ತು ಸ್ವೀಕರಿಸಲು ಇಲ್ಲಿದ್ದೇವೆ. ಹಾಡಿನ ಕಾರಣದಿಂದಾಗಿ ನಾವೆಲ್ಲರೂ ಇಲ್ಲಿದ್ದೇವೆ. ವಂದೇ ಮಾತರಂನ ಋಣವನ್ನು ನಾವೆಲ್ಲರೂ ಅಂಗೀಕರಿಸುವ ಪವಿತ್ರ ಸಂದರ್ಭ ಇದು… ಇದು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ರಾಷ್ಟ್ರವನ್ನು ಒಂದುಗೂಡಿಸಿದೆ ಎಂದರು
ಮತ್ತೆ ಒಂದಾಗಲು ಮತ್ತು ಎಲ್ಲರೊಂದಿಗೆ ಒಟ್ಟಾಗಿ ಚಲಿಸುವ ಸಮಯ ಬಂದಿದೆ. ಹಾಡು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಮಗೆ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡಬೇಕು. ೨೦೪೭ ರ ವೇಳೆಗೆ ರಾಷ್ಟ್ರವನ್ನು ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದವನ್ನಾಗಿ ಮಾಡುವ ಸಂಕಲ್ಪ ಪುನರುಚ್ಚರಿಸಬೇಕಾಗಿದೆ ಎಂದರು.
ಹಿನ್ನೆಲೆ
ಬಂಕಿಮ್ ಚಂದ್ರ ಚಟರ್ಜಿ ಅವರು ಬರೆದ ಈ ಗೀತೆ ೧೮೭೫ ರ ನವೆಂಬರ್ ೭ ರಂದು ಸಾಹಿತ್ಯ ನಿಯತಕಾಲಿಕೆ ಬಂಗದರ್ಶನ್‌ನಲ್ಲಿ ಮೊದಲು ಪ್ರಕಟವಾಯಿತು.
ಗೀತೆಯ ವಾರ್ಷಿಕೋತ್ಸವದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ, ೧೯೩೭ ರ ಫೈಜಾಬಾದ್‌ನಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ಕಾಂಗ್ರೆಸ್ ಮೂಲ ಹಾಡಿನಿಂದ ಪ್ರಮುಖ ಚರಣಗಳನ್ನು ತೆಗೆದುಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು.
ಈ ನಿರ್ಧಾರ ರವೀಂದ್ರನಾಥ ಟ್ಯಾಗೋರ್ ಅವರ ಸಲಹೆಯನ್ನು ಆಧರಿಸಿದೆ. ಇತರ ಸಮುದಾಯಗಳು ಮತ್ತು ನಂಬಿಕೆಗಳ ಸದಸ್ಯರ ಭಾವನೆಗಳನ್ನು ಒಪ್ಪುವಂತಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ ೧೯ ರವರೆಗೆ ನಡೆಯಲಿದೆ. ಗೀತೆಯ ಬಗ್ಗೆ ಸರ್ಕಾರದ ಮತ್ತು ವಿರೋಧ ಪಕ್ಷದ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳಿವೆ.



























