
ಜನಪದ ಸೊಗಡಿನ ಸಂಗೀತದಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ‘ಲೋ ನವೀನ’ ಚಿತ್ರದ ಎರಡನೇ ಹಾಡು ಇದೀಗ ಬಿಡುಗಡೆಗೊಂಡಿದೆ. ಗಾಯಕನಾಗಿ ಅಪಾರ ಜನಪ್ರಿಯತೆ ಪಡೆದಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಈ ಚಿತ್ರದ ‘ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ’ ಎಂಬ ಹಾಡು ಆನಂದ್ ಆಡಿಯೋ ಮೂಲಕ ಅನಾವರಣಗೊಂಡಿದ್ದು, ನಟಿ ಸೋನಾಲ್ ಮೊಂಥೆರೋ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈಗಾಗಲೇ ಬಿಡುಗಡೆಯಾಗಿರುವ ಜನಪದ ಶೈಲಿಯ ‘ಕೋಣಾಣೆ’ ಹಾಡು ನಿರೀಕ್ಷೆಗೂ ಮೀರಿ ಜನಪ್ರಿಯವಾಗಿ ಏಳು ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದು ಹಿಟ್ ಆಗಿದೆ. ಹೊಸದಾಗಿ ಬಿಡುಗಡೆಯಾದ ಎರಡನೇ ಹಾಡು ಚಿತ್ರದಲ್ಲಿನ ನಾಯಕಿಯ ಪರಿಚಯ ಗೀತೆಯಾಗಿದ್ದು, ಗ್ರಾಮೀಣ ಸೊಗಡಿನ ಲವಲವಿಕೆಯೊಂದಿಗೆ ಗಮನ ಸೆಳೆಯುತ್ತಿದೆ.
ಹಾಡು ಬಿಡುಗಡೆ ಸಮಾರಂಭದಲ್ಲಿ ಮಾಜಿ ಸಂಸದ ಪುಟ್ಟರಾಜು, ರಾಮಮೂರ್ತಿ, ಮಾದೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನಂತರ ಮಾತನಾಡಿದ ನಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು, “ಮಳವಳ್ಳಿಯ ಗ್ರಾಮೀಣ ಹಿನ್ನೆಲೆಯ ಕಥೆಯೇ ‘ಲೋ ನವೀನ’. ನಿರ್ಮಾಪಕರಾದ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ ಅವರ ಬೆಂಬಲದಿಂದ ನಾನು ನಾಯಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನೇ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಉಳಿದ ಹಾಡುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ” ಎಂದರು.
ನಿರ್ಮಾಪಕ ಬೆನ್ ಚಿಕ್ಕಸ್ವಾಮಿ ಮಾತನಾಡಿ, “ಗ್ರಾಮೀಣ ಜನಪದ ಸೊಗಡಿನ ಕಥೆ ನಮಗೆ ತುಂಬಾ ಇಷ್ಟವಾಯಿತು. ಅದಕ್ಕಾಗಿಯೇ ಈ ಚಿತ್ರವನ್ನು ನಿರ್ಮಿಸಲು ಮುಂದಾದೆವು” ಎಂದು ಹೇಳಿದರು. ನಾಯಕಿ ವರ್ಷ, “ನಟಿಯಾಗಬೇಕೆಂಬ ಕನಸು ಈ ಚಿತ್ರದ ಮೂಲಕ ನನಸಾಗಿದೆ” ಎಂದರು. ನಿರ್ದೇಶಕ ಧನುರ್ಧಾರಿ ಪವನ್, “ಇದು ನನ್ನ ಮೊದಲ ನಿರ್ದೇಶನದ ಚಿತ್ರ. ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ” ಎಂದು ಹೇಳಿದರು.
ಚಿತ್ರದ ಛಾಯಾಗ್ರಹಣ ರಿಷಿಕೇಶ್ ಅವರದು, ನೃತ್ಯ ನಿರ್ದೇಶನ ವಿನಾಯಕ್ ಆಚಾರ್ಯ ಅವರದ್ದು. ಅಂದಾನಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ‘ಲೋ ನವೀನ’ ಚಿತ್ರ ತನ್ನ ಗ್ರಾಮೀಣ ವಾಸನೆ ಮತ್ತು ಜನಪದ ಸಂಗೀತದ ಮೂಲಕ ಪ್ರೇಕ್ಷಕರ ಹೃದಯ ಗೆಲ್ಲುವ ನಿರೀಕ್ಷೆಯಲ್ಲಿದೆ.






















