Home ಜಿಲ್ಲೆ ಮೈಸೂರು ಲಿಂಕ್ ಡಾಕ್ಯುಮೆಂಟ್ ವಾರ್ಷಿಕ ಕ್ರಿಯಾಯೋಜನೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣ ಗೊಳಿಸಿ: ಕೆ.ಆರ್.ನಂದಿನಿ

ಲಿಂಕ್ ಡಾಕ್ಯುಮೆಂಟ್ ವಾರ್ಷಿಕ ಕ್ರಿಯಾಯೋಜನೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣ ಗೊಳಿಸಿ: ಕೆ.ಆರ್.ನಂದಿನಿ

ಸಂಜೆವಾಣಿ ವಾರ್ತೆ
ಮಂಡ್ಯ:ಆ.29:-
2026-27ನೇ ಸಾಲಿನ ಲಿಂಕ್ ಡಾಕ್ಯು ಮೆಂಟ್ ವಾರ್ಷಿಕ ಕ್ರಿಯಾ ಯೋಜನೆಯಡಿ ಅನು ಮೋದನೆಯಾಗಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಹಾಗೂ ಗುಣ ಮಟ್ಟದಿಂದ ಅನುಷ್ಠಾನ ಗೊಳಿಸಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್.ರವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.


ಜಿಲ್ಲಾ ಪಂಚಾಯತ್ ನ ಕೆಸ್ವಾನ್ ಸಭಾಂಗಣದಲ್ಲಿ ನಿನ್ನೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲಿಂಕ್ ಡಾಕ್ಯುಮೆಂಟ್ ವಾರ್ಷಿಕ ಕ್ರಿಯಾ ಯೋಜನೆ ಯಡಿ ಅನುಮೋದನೆ ಯಾಗಿರುವ ಎಲ್ಲಾ ಕಾಮಗಾರಿಗಳ ಪ್ರಗತಿ, ಬಾಕಿ ಇರುವ ಅಂದಾಜುಪಟ್ಟಿಗಳು, ತಾಂತ್ರಿಕ ಪರಿಶೀಲನೆ, ಆಡಳಿತಾತ್ಮಕ ಅನು ಮೋದನೆ ಹಾಗೂ ಟೆಂಡರ್ ಹಂತದ ಪ್ರಗತಿಯನ್ನು ತಾಲೂಕುವಾರು ಹಾಗೂ ಇಲಾಖಾವಾರು ಪರಿಶೀಲಿಸಿದರು.


ಕಾಮಗಾರಿಗಳ ಅನುಷ್ಠಾನದಲ್ಲಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಯಾವುದೇ ರೀತಿಯ ವಿಳಂಬವಾಗ ಬಾರದು. ಕಾಮಗಾರಿಗಳಲ್ಲಿ ಬದಲಾವಣೆ ಅಗತ್ಯವಿದ್ದಲ್ಲಿ ನಿಗದಿತ ಪ್ರಕ್ರಿಯೆಯಂತೆ ತಕ್ಷಣ ಕ್ರಮ ಕೈಗೊಂಡು, ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆದು ಕಾಮಗಾರಿ ಅನುಷ್ಟಾನ ಗೊಳಿಸುವಂತೆ ಸೂಚಿಸಿದರು.
ಲಿಂಕ್ ಡಾಕ್ಯುಮೆಂಟ್ ಲೆಕ್ಕ ಶೀರ್ಷಿಕೆಯಡಿ ವಿವಿಧ ಇಲಾಖೆಗಳ ಬಾಕಿ ಇರುವ ಎಲ್ಲಾ ಅಂದಾಜು ಪಟ್ಟಿಗಳನ್ನು ಆಗಸ್ಟ್ 31ರೊಳಗಾಗಿ ಸಲ್ಲಿಸಿ, ಅಗತ್ಯವಿರುವ ಆಡಳಿತಾತ್ಮಕ ಅನುಮೋದನೆ ಪಡೆ ಯುವಂತೆ ಸಿಇಒ ಸೂಚಿಸಿದರು.


ಯಾವುದೇ ಇಲಾಖೆಯಲ್ಲಿ ಅಂದಾಜುಪಟ್ಟಿ ತಯಾರಿಕೆ ಅಥವಾ ಆಡಳಿತಾತ್ಮಕ ಅನುಮೋದನೆ ಬಾಕಿ ಉಳಿಯದಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ವೈಯಕ್ತಿಕ ಜವಾಬ್ದಾರಿ ವಹಿಸಬೇಕು. ಅಂದಾಜುಪಟ್ಟಿ ಸಲ್ಲಿಕೆಯಲ್ಲಿ ವಿಳಂಬವಾದರೆ ಕಾಮಗಾರಿಗಳ ಅನುಷ್ಠಾನವೂ ವಿಳಂಬವಾಗುವು ದರ ಜೊತೆಗೆ ಅನುದಾನ ಬಳಕೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಅನುದಾನ ವ್ಯತ್ಯಾಸ ಆಗುವಂತಹ ಪರಿಸ್ಥಿತಿ ನಿರ್ಮಾಣವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ನಿವೇಶನ ರಹಿತರಿಗೆ ಸೂಕ್ತ ಸರ್ಕಾರಿ ಜಾಗ ಗುರುತಿಸಲು ಸೂಚನೆ
ಸರ್ಕಾರದ ವಿಶೇಷ ಅಭಿಯಾನದಡಿ ನಿವೇಶನ ರಹಿತ ಹಾಗೂ ವಸತಿ ರಹಿತರಿಗೆ ನಿವೇಶನ ಒದಗಿಸುವ ಹಿನ್ನೆಲೆಯಲ್ಲಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗಗಳ ಸೂಕ್ತತೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಗುರುತಿಸಲಾಗಿರುವ ಸರ್ಕಾರಿ ಜಾಗವು ನಿವೇಶನ ರಚನೆ ಹಾಗೂ ಮನೆ ನಿರ್ಮಾಣಕ್ಕೆ ತಾಂತ್ರಿಕವಾಗಿ ಮತ್ತು ಭೌಗೋಳಿಕವಾಗಿ ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಗುಡ್ಡ ಪ್ರದೇಶ, ತಗ್ಗು ಪ್ರದೇಶ, ಜೌಗು ಪ್ರದೇಶ, ಮುಳುಗಡೆ ಸಾಧ್ಯತೆ, ಅತಿಯಾದ ಎತ್ತರ, ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ತೊಂದರೆ ಸೇರಿದಂತೆ ಯಾವುದೇ ಸಮಸ್ಯೆ ಗಳಿದ್ದಲ್ಲಿ ಅವುಗಳ ಕಾರಣಗಳನ್ನು ಸ್ಪಷ್ಟವಾಗಿ ದಾಖಲಿಸುವಂತೆ ತಿಳಿಸಿದರು.
ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಜಾಗದ ಸೂಕ್ತತೆಯ ಕುರಿತು 10 ದಿನಗಳೊಳಗಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.


ನಿವೇಶನ ರಹಿತರು ಹಾಗೂ ವಸತಿ ರಹಿತರ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲು ಸೂಚನೆ
ಪ್ರತಿ ಗ್ರಾಮ ಪಂಚಾಯಿತಿ ಯಲ್ಲಿ ಪ್ರಸ್ತುತ ಇರುವ ನಿವೇಶನ ರಹಿತರು ಹಾಗೂ ವಸತಿ ರಹಿತರ ಸಂಖ್ಯೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ ದೃಢೀಕರಿ ಸುವಂತೆ ಸೂಚಿಸಿದರು.
ನಿವೇಶನ ಇದ್ದು ಮನೆ ಇಲ್ಲದವರು ಹಾಗೂ ನಿವೇಶನವೇ ಇಲ್ಲದವರ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ, ಸಂಬಂಧಪಟ್ಟ ತಹಶೀಲ್ದಾರರಿಗೆ ಕಳುಹಿಸ ಬೇಕು.ಅರ್ಹರಿಗೆ ವಸತಿ ಉದ್ದೇಶಕ್ಕಾಗಿ ಸೂಕ್ತ ಸರ್ಕಾರಿ ಜಾಗವನ್ನು ಗುರುತಿಸಿ ಕಾಯ್ದಿರಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಬಾಕಿ ಇರುವ ಕಾಮಗಾರಿಗಳು, ಅಂದಾಜುಪಟ್ಟಿಗಳ ಸ್ಥಿತಿ, ಕಾಮಗಾರಿ ಬದಲಾವಣೆ, ಆಡಳಿತಾತ್ಮಕ ಅನುಮೋದನೆ ಹಾಗೂ ಟೆಂಡರ್ ಹಂತದ ಪ್ರಗತಿಯನ್ನು ಇಲಾಖಾವಾರು ಪರಿಶೀಲಿಸಲಾಯಿತು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಎಸ್. ಧನುಷ್, ಉಪ ಕಾರ್ಯದರ್ಶಿ (ಆಡಳಿತ) ಶಿವಲಿಂಗಯ್ಯ, ಯೋಜನಾ ನಿರ್ದೇಶಕ ಸುಂದರ್ ರಾಜ್, ಜಿಪಂ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.