ಸಂಜೆವಾಣಿ ನ್ಯೂಸ್
ಮೈಸೂರು: ಆ.04:- ರೋಗಿಗಳು ಮತ್ತು ಅವರ ಸಂಬಂಧಿಕರ ಬಳಿಕ ಹಣಕ್ಕೆ ಬೇಡಿಕೆ ಇಡುತ್ತಿರುವ ಆರೋಪ ಸಂಬಂಧ ಕೆ. ಆರ್.ಆಸ್ಪತ್ರೆ ಸಿಬ್ಬಂದಿಯನ್ನು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ತರಾಟೆಗೆ ತೆಗೆದುಕೊಂಡರು.
ಕಳೆದ ಮೂರು ದಿನಗಳಿಂದ ಮೈಸೂರು ಜಿಲ್ಲೆಯ ಪ್ರವಾಸದಲ್ಲಿರುವ ಅವರು, ಶನಿವಾರ ಬೆಳಗ್ಗೆ ನಗರದ ಕೆ. ಆರ್. ಆಸ್ಪತ್ರೆಗೆ ಭೇಟಿ ನೀಡಿ ವಾಡ್ರ್ಗಳನ್ನು ಪರಿಶೀಲನೆ ನಡೆಸಿ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡರು. ಸ್ಥಳದಲ್ಲಿದ್ದ ಮೈಸೂರು ಮೆಡಿಕಲ್ ಕಾಲೇಜು ಡೀನ್ ಹಾಗೂ ನಿರ್ದೇಶಕರಾದ ದಾಕ್ಷಾಯಿಣಿ ಅವರನ್ನು ಪ್ರಶ್ನಿಸಿ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳು ಮತ್ತು ಸಿಬ್ಬಂದಿಯು ರೋಗಿಗಳಿಂದ ಹಣಕ್ಕೆ ಬೇಡಿಕೆಯಿಟ್ಟ ಬಗ್ಗೆ ದೂರುಗಳು ಕೇಳಿಬಂದಿವೆ. ಚಿಕಿತ್ಸೆಗಾಗಿ ರೋಗಿಗಳಿಂದ ಹಣ ಸ್ವೀಕರಿಸಿದರೆ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಸ್ಪತ್ರೆಯ ಪ್ರತಿ ವಾಡ್ರ್ಗೆ ತೆರಳಿ ಸರಿಯಾಗಿ ಚಿಕಿತ್ಸೆ ದೊರೆಯುತ್ತಿದೆಯೇ, ಶೌಚಾಲಯ, ಊಟದ ವ್ಯವಸ್ಥೆ ಸರಿಯಾಗಿದೆಯೇ? ಎಂದು ರೋಗಿಗಳಿಂದ ಮಾಹಿತಿ ಪಡೆದರು. ಎಕ್ಸ್ ರೇ ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಮತ್ತು ವೈದ್ಯರ ಬಗ್ಗೆ ವಿಚಾರಿಸಿದರು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕೆಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು.


























