ರೋಗಿಗಳ ನೋವಿಗೆ ರೋಟರಿ ಸಂಸ್ಥೆ ಸ್ಪಂದನೆ: ಡಾ.ನಾಗಾರ್ಜುನ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.17
– ರೋಗಿಗಳ ನೋವನ್ನು ಅರ್ಥಮಾಡಿಕೊಂಡು ಅವರಿಗೆ ಸ್ಪಂದಿಸುವುದು ರೋಟರಿ ಸಂಸ್ಥೆ ಎಂದು ಪಿಡಿಜಿ ರೋ.ಡಾ. ನಾಗಾರ್ಜುನ್ ತಿಳಿಸಿದರು.


ರೋಟರಿ ಸಂಸ್ಥೆ ಚಾಮರಾಜನಗರ ಮತ್ತು ರೋಟರಿ ಐವರಿ ಸಿಟಿ, ಮೈಸೂರು ವತಿಯಿಂದ ಚಾಮರಾಜನಗರ ರೋಟರಿ ಡಯಾಲಿಸಿಸ್ ಕೇಂದ್ರದ ಸಹಾಯಾರ್ಥ ಡಾ. ರಾಜ್‍ಕುಮಾರ್. ಡಾ.ಪಿ.ಬಿ.ಶ್ರೀನಿವಾಸ್, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ  ಅವರ ಹಳೆಯ ಚಲನಚಿತ್ರ ಗೀತೆಗಳ ಸುಮಧುರ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೋಗಿಗಳ ನೋವನ್ನು ಅರ್ಥಮಾಡಿಕೊಂಡು ಅವರಿಗೆ ಸ್ಪಂದಿಸುವುದು ರೋಟರಿ ಸಂಸ್ಥೆ, ಚಾಮರಾಜನಗರದಲ್ಲಿ ಡಯಾಲಿಸಿಸ್ ಪ್ರಾರಂಭಕ್ಕೂ ಮುನ್ನಾ ಹಲವು ಜನರು ಮೈಸೂರಿಗೆ ಹೋಗಿ ಡಯಾಲಿಸಿಸ್‍ಗಾಗಿ ವಾರಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಿತ್ತು. ಅದನ್ನು ಮನಗಂಡು ಮೈಸೂರು ರೋಟರಿ ಐವರಿ ಸಿಟಿ ಪ್ರೇರಣೆ, ಉತ್ತೇಜನದಿಂದ ನಾವು ಜಿಲ್ಲೆಯಲ್ಲಿ ಒಂದು ಡಯಾಲಿಸಿಸ್ ಕೇಂದ್ರ ಆರಂಭಿಸಿದ್ದೆವು. 3 ಮಿಷನ್‍ನಿಂದ ಆರಂಭವಾದ ಈ ಡಯಾಲಿಸಿಸ್ ಸೆಂಟರ್ ಇಂದು 10 ಮಿಷನ್‍ನೊಂದಿಗೆ ಅತ್ಯುತ್ತಮ ಸೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದರು.


15 ವರ್ಷದಿಂದ 65 ವರ್ಷದ ತನಕ ರೋಗಿಗಳು ನಮ್ಮ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಆ ರೋಗಿಗಳನ್ನು ನೋಡಿದರೆ ಕಣ್ಣಿನಲ್ಲಿ ನೀರು ಬರುತ್ತದೆ. ಈ ಸೆಂಟರ್ ನಿರ್ವಹಣೆಗಾಗಿ ಸಾಕಷ್ಟು  ಖರ್ಚು ಬರುತ್ತಿದೆ. ಅದಕ್ಕೆ ಬೆನ್ನೆಲಾಗಿ ನಿಂತವರು ಮೈಸೂರು ರೋಟರಿ ಐವರಿ ಸಿಟಿ ವಿ.ಎನ್.ಪ್ರಸಾದ್ ಅವರಿಗೆ ಚಾಮರಾಜನಗರ ಜನತೆ ಯಾವಾಗಲೂ ಚಿರಋಣಿಯಾಗಿರುತ್ತದೆ ಎಂದರು.
ರೋಟರಿ ಸಂಸ್ಥೆಯ ಸದಸ್ಯರು ತಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬಕ್ಕೆ ಡಯಾಲಿಸಿಸ್ ಸೆಂಟರ್ಗೆಗೆ ವರ್ಷಕ್ಕೆ 10 ಸಾವಿರ ಕೊಡುತ್ತಾರೆ. ಅದರಿಂದ 20 ರೋಗಿಗಳಿಗೆ ಡಯಾಲಿಸಿಸ್ ಆಗುತ್ತದೆ. ಆದರೂ ಕೂಡ ತಿಂಗಳಿಗೆ 2 ಲಕ್ಷದಿಂದ 3 ಲಕ್ಷದವರೆಗೆ ಖರ್ಚು ಬರುತಿದೆ. ಇದನ್ನು ಸರಿದೂಗಿಸಲು ನಾವು ಮಾಡಿರುವ ಯೋಜನೆ ಎಂದರೆ ಒಬ್ಬರು ಸದಸ್ಯರು ತಮ್ಮ ಪ್ರೀತಿಪಾತ್ರರ ಹೆಸರಿನಲ್ಲಿ ಪ್ರತಿ ವರ್ಷ 10 ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿದರೆ ಅನುಕೂಲವಾಗುತ್ತದೆ ಎಂದರು.


ಕಾರ್ಯಕ್ರಮಕ್ಕೆ ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ರೋಟರಿ ಐವರಿ ಸಿಟಿ ಅಧ್ಯಕ್ಷ ಕೇಶವಕಾಂಚನಾ ಜೊತೆಯಾಗಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಡಾ.ನಟಶೇಖರ್, ಅಪೂರ್ವ ನಟಶೇಖರ್, ತ್ಯಾಗರಾಜು, ಜಯಂತ್ ಭಟ್, ಅಶ್ವಿನಿಪ್ರಭು ರೋಟರಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಪಲ್ಲವಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಗಾಯಕರಾದ ವಿ.ಎನ್.ಪ್ರಸಾದ್ ಮತ್ತು ತಂಡದವರು ಸುಮಧುರ ಗೀತೆಗಳನ್ನು ಗಾಯನ ಮಾಡಿ ಪೇಕ್ಷರಿಗೆ ಸಂಗೀತ ರಸದೌತಣ ಉಣಬಡಿಸಿದರು.