Home ಸಿನೆಮಾ ರೈತರ ಬದುಕಿನ ನೈಜ ಬದುಕಿನ ಕಥೆ ‘ರೈತರ ಮಕ್ಕಳಿಗೆ ಹೆಣ್ಣು ಕೊಡಿ’

ರೈತರ ಬದುಕಿನ ನೈಜ ಬದುಕಿನ ಕಥೆ ‘ರೈತರ ಮಕ್ಕಳಿಗೆ ಹೆಣ್ಣು ಕೊಡಿ’

ಗ್ರಾಮೀಣ ಬದುಕಿನ ಸಂಕಷ್ಟಗಳು, ರೈತ ಕುಟುಂಬಗಳ ನೋವು-ನಲಿವು ಹಾಗೂ ಇಂದಿನ ಸಾಮಾಜಿಕ ವಾಸ್ತವವನ್ನು ತೆರೆಗೆ ತರುವ ‘ರೈತರ ಮಕ್ಕಳಿಗೆ ಹೆಣ್ಣು ಕೊಡಿ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡು ಗಮನ ಸೆಳೆದಿವೆ.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿರುವ ಕೆಂಪರಾಮ್ ಹೆಡಿಯಾಲ, ಮೆಲ್ಲುಲಿಗಾನ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವನ್ನೂ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಬದುಕಿನ ನೈಜ ಸಮಸ್ಯೆಗಳನ್ನು ಚಿತ್ರದಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಡಲಾಗಿದೆ ಎಂದರು.

ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ರೈತರ ಮಕ್ಕಳಿಗೆ ಮದುವೆಯಾಗಲು ಎದುರಾಗುವ ಸವಾಲುಗಳನ್ನು ಕಥೆಯ ಕೇಂದ್ರಬಿಂದುವಾಗಿಸಿಕೊಂಡಿರುವ ಈ ಚಿತ್ರ, ಗ್ರಾಮೀಣ ಜೀವನದ ಸೂಕ್ಷ್ಮತೆಗಳು ಹಾಗೂ ಭಾವನಾತ್ಮಕ ಕ್ಷಣಗಳನ್ನು ತೆರೆದಿಡುತ್ತದೆ. ಹಳ್ಳಿಯ ಮಣ್ಣಿನ ಸೊಗಡಿನೊಂದಿಗೆ ಸಾಗುವ ಕಥೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ವಿಶ್ವಾಸ ಚಿತ್ರತಂಡದ್ದಾಗಿದೆ.

ಚಿತ್ರದಲ್ಲಿ ಜಗದೀಶ್ ಮುಕಿ ನಾಯಕನಾಗಿ ಹಾಗೂ ದಿವ್ಯಾಶ್ರೀ ನಾಯಕಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ ಜೈ ಅಮೋಘ್‌ದಾಸ್, ಅಗಸ್ತ್ಯ ಪ್ರೇಮ್, ಸಂಗನಗೌಡ, ಸಂತೋಷ್ ಜೋಗುಳ್, ಅಶ್ವಿನಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಗೀತ, ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನು ರೋಹನ್ ಎಸ್. ದೇಸಾಯಿ ನಿರ್ವಹಿಸಿದ್ದು, ಸಾಹಸ ನಿರ್ದೇಶನ ಸಂತೋಷ್ ರಾಥೋಡ್ ಅವರದು. ಅಕುಲ್ ಮಾಸ್ಟರ್, ಅಜಯ್ ಜೈಕೃಷ್ಣ ಮತ್ತು ಸಾಕ್ಷಿ ನೃತ್ಯ ಸಂಯೋಜನೆ ಮಾಡಿದ್ದಾರೆ.

ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ಸುತ್ತಮುತ್ತ ಚಿತ್ರೀಕರಿಸಿರುವ ಈ ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಗ್ರಾಮೀಣ ಜೀವನದ ಸ್ಪಂದನಗಳನ್ನು ಹೊತ್ತಿರುವ ಈ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.