ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಎಸ್‌ಟಿಎಸ್ ಕರೆ

ಕೆಂಗೇರಿ, ನ. ೪ : ರೈತರು ದೇಶದ ಬೆನ್ನೆಲುಬು ಅವರು ಸ್ವಾವಲಂಬಿ ಬದುಕು ರೂಪಿಸಿಕೊಂಡು ಆರ್ಥಿಕವಾಗಿ ಸದೃಢತೆ ಸಾಧಿಸಲು ಎಲ್ಲ ರೀತಿಯ ಪ್ರೋತ್ಸಾಹ,ಸಹಕಾರ ನೀಡುವುದಾಗಿ ಶಾಸಕ ಎಸ್. ಟಿ.ಸೋಮಶೇಖರ್ ತಿಳಿಸಿದರು.


ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಸಂದ್ರ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹೇಂದ್ರ ರವರನ್ನು ಅಭಿನಂದಿಸಿ ಅವರು ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಲು ಉತ್ಪಾದಕ ಸಹಕಾರಿ ಸಂಘಗಳು ಸ್ವಂತ ಕಟ್ಟಡ ನಿರ್ಮಾಣ ಮಾಡಲು ಅಗತ್ಯ ಅನುದಾನ ನೀಡಲಾಗುವುದು ಎಂದರು. ರೈತರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುವುದೇ ನಮ್ಮ ಧ್ಯೇಯವಾಗಿದೆ ಎಂದರು. ರೈತರ,ನಾಗರಿಕರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಹೈನುಗಾರಿಕೆ ಮಹತ್ವದ ಪಾತ್ರವಹಿಸಿದೆ ಎಂದರು. ಸಹಕಾರಿ ಕ್ಷೇತ್ರ ಜನರ ನಡುವೆ ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು ವೃದ್ಧಿಸುವ ಮೂಲಕ ಸಾಮಾಜಿಕ ಕ್ಷೇತ್ರದ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದರು.


ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಕೃಷ್ಣಯ್ಯ ಮಾತನಾಡಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಗ್ರಾಮೀಣ ಪ್ರದೇಶದ ರೈತರ ಸರ್ವಾಂಗೀಣ ಅಭ್ಯುದಕ್ಕಾಗಿ ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು. ಶಾಸಕ ಎಸ್. ಟಿ. ಸೋಮಶೇಖರ್ ಅವರ ಮಾರ್ಗದರ್ಶನ,ಪ್ರೋತ್ಸಾಹ ಹಾಗೂ ಸಹಕಾರದಿಂದ ರೈತರ ಸೇವೆ ಮಾಡಲು ಸಾಧ್ಯವಾಗಿದೆ ಎಂದರು.ಹಾಲು ಉತ್ಪಾದನೆಯಲ್ಲಿ ತೊಡಿಸಿಕೊಂಡಿರುವ ರೈತ ಕುಟುಂಬಗಳಿಗೆ ಬಮೂಲ್ ಟ್ರಸ್ಟ್ ನಿಂದ ದೊರಕುವ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಲಾಗುವುದು ಎಂದರು.


ನೂತನ ಅಧ್ಯಕ್ಷ ಮಹೇಂದ್ರ ಮಾತನಾಡಿ ಹಾಲಿನ ಉತ್ಪಾದನೆ ಹೆಚ್ಚಿಸಲು ವೈಜ್ಞಾನಿಕ ರೀತಿಯಲ್ಲಿ ಹಸುಗಳ ನಿರ್ವಹಣೆಯ ಕುರಿತು ರೈತರಿಗೆ ಅಗತ್ಯ ಮಾಹಿತಿ ನೀಡಿ ಗುಣಮಟ್ಟದ ಹಾಲು ಉತ್ಪಾದನೆಗೆ ಪ್ರೋತ್ಸಾಹಿಸಲಾಗುವುದು ಎಂದರು, ಕಾಂಗ್ರೆಸ್ ಮುಖಂಡ ತಿಮ್ಮೇಗೌಡ, ರಾಮಸಂದ್ರ ಅಶೋಕ್, ಮುರುಳಿಧರ್, ಮಂಜುನಾಥ್ ಗೌಡ, ಕಾರ್ಯನಿರ್ವಹಣಾಧಿಕಾರಿ ಗೋವಿಂದ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು .