
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಫೆ.25:- ರೈತರುಗಳು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಒತ್ತಾಯಿಸಿದರು.
ಅವರು ತಾಲೂಕಿನ ಲಕ್ಕಿಕುಪ್ಪೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ರೈತರುಗಳು ಕಷ್ಟಪಟ್ಟು ಸಾಲ ಸೋಲ ಮಾಡಿ ಬೆಳೆದಂತಹ ಬೆಳೆಗಳಿಗೆ ಉತ್ತಮ ಬೆಲೆ ಸಿಗದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಸರ್ಕಾರಗಳು ಬೆಳೆಗಳಿಗೆ ಉತ್ತಮ ಬೆಲೆಯನ್ನು ನೀಡುವುದರ ಮೂಲಕ ರೈತರ ಹಿತವನ್ನು ಕಾಪಾಡಬೇಕು ಎಂದರು.
ಕೃಷಿ ಕ್ಷೇತ್ರವನ್ನು ಕಡೆಗಣಿಸುವ ಸರ್ಕಾರಗಳ ವಿರುದ್ಧ ರೈತರು ಧ್ವನಿ ಎತ್ತುವ ಮೂಲಕ ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕು ಎಂದರು.
ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮತಗಳಿಕೆಗೋಸ್ಕರ ಜನಸಾಮಾನ್ಯರಿಗೆ ಆಸೆತೋರಿಸಿ ಅಧಿಕಾರಕ್ಕೆ ಬರುತ್ತಿವೆ. ಅವುಗಳು ನಿಜವಾಗಿ ರೈತರ ಪರ ಕಾರ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿದ ಅವರು ರೈತರು ವ್ಯವಸಾಯೋತ್ಪನ್ನವನ್ನು ಮಾಡುವ ಮೂಲಕ ಈ ನಾಡಿಗೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಾ ಬರುತ್ತಿದ್ದಾರೆ. ಇಂತಹ ರೈತರುಗಳ ಬೆಳೆಗಳಿಗೆ ಸರಿಯಾದ ಬೆಲೆಯನ್ನು ನೀಡಬೇಕೆಂದರು.
ರೈತರುಗಳು ಸಂಘಟಿತರಾಗಿ ಹೋರಾಟವನ್ನು ಮಾಡಿದರೆ ಅದರಲ್ಲಿ ಖಂಡಿತವಾಗಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಲಕ್ಕಿಕುಪ್ಪೆ ಗ್ರಾಮ ಘಟಕದ ನೂತನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳಿಗೂ ಹಸಿರು ಶಾಲು ಹೊದಿಸಿ ಅಭಿನಂದಿಸಿ ಪ್ರಮಾಣವಚನ ಬೋಧಿಸಿ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಶ್ರೀಕಂಠೇಗೌಡ, ಗೌರವಾಧ್ಯಕ್ಷ ಜವರೇಗೌಡ, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ರವಿ, ಖಜಾಂಚಿ ತಿಮ್ಮೇಗೌಡ, ಸಂಚಾಲಕ ರಾಮಯ್ಯ, ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ನೇತ್ರಾವತಿ, ತಾಲೂಕು ಅಧ್ಯಕ್ಷ ಎಸ್.ಬಿ.ಶೇಖರ್, ಕಾರ್ಯಾಧ್ಯಕ್ಷ ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಸ್‍ಜಿಆರ್ ಧನಂಜಯ, ಕೆ.ಆರ್.ನಗರ ತಾಲ್ಲೂಕು ಅಧ್ಯಕ್ಷ ನಟರಾಜು ಸೇರಿದಂತೆ ಹಲವರು ಇದ್ದರು.






























