Home ಜಿಲ್ಲೆ ಮೈಸೂರು ರುದ್ರಭೂಮಿ ಇಲ್ಲದೆ ಹಳ್ಳದ ದಂಡೆಯಲ್ಲೇ ಅಂತ್ಯಸಂಸ್ಕಾರ

ರುದ್ರಭೂಮಿ ಇಲ್ಲದೆ ಹಳ್ಳದ ದಂಡೆಯಲ್ಲೇ ಅಂತ್ಯಸಂಸ್ಕಾರ

ಸಂಜೆವಾಣಿ ನ್ಯೂಸ್
ಹನೂರು ಸೆ 8 :-
ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಿಕಾಪುರ ಗ್ರಾಮದಲ್ಲಿ ಸ್ವಂತ ರುದ್ರಭೂಮಿ ಇಲ್ಲದೆ ಮೃತರ ಅಂತ್ಯ ಸಂಸ್ಕಾರವನ್ನು ಹಳ್ಳದ ದಂಡೆಯಲ್ಲೇ ನೆರವೇರಿಸುವ ಅಮಾನವೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಸ್ಥಳೀಯ ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಳೆದ 70 ವರ್ಷಗಳಿಂದ ಈ ಗ್ರಾಮದಲ್ಲಿ ನೆಲೆಸಿರುವ ಒಬಿಸಿ ಸಮುದಾಯಕ್ಕೆ ಸರ್ಕಾರದಿಂದ ಸಾರ್ವಜನಿಕ ಬಳಕೆಗಾಗಿ ಮಂಜೂರಾಗಿದ್ದ 0.44 ಸೆಂಟ್ ಸ್ಮಶಾನದ ಜಾಗವಿದೆ. ಆದರೆ ಈ ಜಾಗಕ್ಕೆ ಮತ್ತೊಂದು ಸಮುದಾಯದವರು ಬೋರ್ಡ್ ಹಾಕಿ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ಈ ಅಕ್ರಮ ಬೋರ್ಡ್‍ಗಳನ್ನು ತೆರವುಗೊಳಿಸುವಂತೆ ತಾಲೂಕು ಆಡಳಿತ ಮತ್ತು ಕಂದಾಯ ಇಲಾಖೆಗೆ ಗ್ರಾಮಸ್ಥರು ಈವರೆಗೆ ನಾಲ್ಕು ಬಾರಿ ಲಿಖಿತ ಮನವಿ ಸಲ್ಲಿಸಿದ್ದಾರೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮವಾಗಿ ಒಬಿಸಿ ಸಮುದಾಯದ ಜನರು ಶವಸಂಸ್ಕಾರಕ್ಕೂ ಪರದಾಡುವಂತಾಗಿದ್ದು, ಅನಿವಾರ್ಯವಾಗಿ ಉಡುತುರೆ ಹಳ್ಳದ ದಂಡೆಯಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು.


ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು. ಸ್ಮಶಾನದ ಜಾಗದಲ್ಲಿ ಹಾಕಿರುವ ಅಕ್ರಮ ಬೋರ್ಡ್‍ಗಳನ್ನು ಕೂಡಲೇ ತೆರವುಗೊಳಿಸಿ, ಮಂಜೂರಾದ ಜಾಗವನ್ನು ಎಲ್ಲಾ ಸಮುದಾಯದವರಿಗೂ ಲಭ್ಯವಾಗುವಂತೆ ಮಾಡಬೇಕು. ಹಳೆಯ ಜಾಗ ದೊರಕದಿದ್ದಲ್ಲಿ, ಒಬಿಸಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 1-00 ಎಕರೆ ಹೊಸ ಸರ್ಕಾರಿ ಜಮೀನನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಬೇಕು. ಸ್ಮಶಾನಕ್ಕೆ ತಲುಪಲು ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


ಈ ಸಮಸ್ಯೆಯನ್ನು ತಕ್ಷಣವೇ ಇತ್ಯರ್ಥಪಡಿಸದಿದ್ದರೆ, ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಮರಣ ಸಂಭವಿಸಿದರೆ ಮೃತದೇಹವನ್ನು ಹನೂರು ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ಇಟ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಟನೆ ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.