Home ಸಿನೆಮಾ ರಿಯಲ್ ಸ್ಟಾರ್ ಪುತ್ರನ ಸಿನಿ ಎಂಟ್ರಿ

ರಿಯಲ್ ಸ್ಟಾರ್ ಪುತ್ರನ ಸಿನಿ ಎಂಟ್ರಿ

ಕಾಶ್ಮೀರದ ಹಿಮಶಿಖರಗಳಲ್ಲಿ ಆಯುಷ್ ಉಪೇಂದ್ರ ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾಗೆ ಚಾಲನೆ ನೀಡಿದ್ದಾರೆ. ಯಾವುದೇ ಜಾಹೀರಾತು ಗದ್ದಲವಿಲ್ಲದೆ ಆರಂಭಗೊಂಡ ಈ ಚಿತ್ರಕ್ಕೆ ಕಾಶ್ಮೀರದ ಸುಂದರ ತಾಣಗಳಲ್ಲಿ ಮುಹೂರ್ತ ನೆರವೇರಿದ್ದು, ಅಲ್ಲಿಯೇ 25 ದಿನಗಳ ಮೊದಲ ಹಂತದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ.


ನಾಯಕನಾಗಿ ತೆರೆಮೇಲೆ ಕಾಣಿಸಿಕೊಳ್ಳಲು ಅಗತ್ಯವಾದ ತರಬೇತಿ ಮತ್ತು ಪೂರ್ವ ತಯಾರಿಗಳನ್ನು ಮಾಡಿಕೊಂಡಿರುವ ಆಯುಷ್, ಈ ಚಿತ್ರದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮೊದಲಾಸಲ’ ಚಿತ್ರವನ್ನು ನಿರ್ದೇಶಿಸಿದ್ದ ಪುರುಷೋತ್ತಮ ಸೂರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.


ಶ್ರೀಕಲ್ಪವೃಕ್ಷ ಮೂವೀ ಮೇಕರ್ಸ್ ಲಾಂಛನದಲ್ಲಿ ಅಭಿಷೇಕ್ ಎನ್. ಸಿರಿವಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಅವರ ಚೊಚ್ಚಲ ನಿರ್ಮಾಣ ಪ್ರಯತ್ನವಾಗಿದೆ. ಖ್ಯಾತ ಛಾಯಾಗ್ರಾಹಕ ಎಚ್.ಸಿ. ವೇಣು ಕ್ಯಾಮೆರಾ ಹಿಡಿದಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.


ಕಾಶ್ಮೀರದಲ್ಲಿ ನಡೆದ ಚಿತ್ರೀಕರಣದ ವೇಳೆ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಉಪಸ್ಥಿತರಿದ್ದು, ಮಗನಿಗೆ ಮಾರ್ಗದರ್ಶನ ನೀಡಿದ್ದಾರೆ. ವಿಶೇಷವಾಗಿ ಪ್ರಿಯಾಂಕ ಉಪೇಂದ್ರ ನಿರ್ಮಾಣದ ವಿವಿಧ ಅಂಶಗಳತ್ತ ಗಮನ ಹರಿಸಿ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ.


ಚಿತ್ರದ ಶೀರ್ಷಿಕೆ ಹಾಗೂ ಉಳಿದ ತಾರಾಬಳಗ ತಂತ್ರಜ್ಞರ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಒಟ್ಟಾರೆ, ಸ್ಟಾರ್ ಕಿಡ್ ಆಗಿ ಅಲ್ಲದೆ ತಮ್ಮದೇ ಆದ ಗುರುತು ಮೂಡಿಸಲು ಸಜ್ಜಾಗಿರುವ ಆಯುಷ್ ಉಪೇಂದ್ರ ಅವರ ಮೊದಲ ಹೆಜ್ಜೆ ಈಗಾಗಲೇ ಕುತೂಹಲ ಕೆರಳಿಸಿದೆ.