
ಸಂಜೆವಾಣಿ ನ್ಯೂಸ್
ಮೈಸೂರು: ಡಿ.09:- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಎಚ್ ಎಐ) 4126 ಕೋಟಿ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್ ಬಿಡಬ್ಲ್ಯೂಎಲ್) ಕೊನೆಗೂ ಅನುಮತಿ ನೀಡಿದೆ. ಈ ಹಿನ್ನೆಲೆ ಬಸವನಹಳ್ಳಿಯಿಂದ ಪಿರಿಯಾಪಟ್ಟಣದವರೆಗಿನ 22.7 ಕಿ.ಮೀಟರ್‍ನ 2ನೇ ಪ್ಯಾಕೇಜ್ ಕಾಮಗಾರಿ ಆರಂಭವಾಗಿದೆ.
ಮೈಸೂರು ಹಾಗೂ ಕುಶಾಲನಗರದ ರಾಷ್ಟ್ರೀಯ ಹೆದ್ದಾರಿ ಯೋಜನೆ ಅನುಷ್ಠಾನಗೊಳ್ಳುವ ಬಸವನಹಳ್ಳಿ ಬಳಿ ವನ್ಯಜೀವಿಗಳ ವಾಸಸ್ಥಾನವಾಗಿರುವ ಕಾರಣ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ನೀಡಿರಲಿಲ್ಲ. ಆದರೆ ಈ ಯೋಜನೆ ಸಾರ್ವಜನಿಕರಿಗೆ ಬಹುಪಯೋಗಿ ಆಗಿರುವ ಹಿನ್ನೆಲೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮನವೊಲಿಕೆಗೆ ಕೊನೆಗೂ ಸ್ಪಂದಿಸಿದ ರಾಷ್ಟ್ರೀಯ ವನ್ಯಜೀವಿ ಮಂಡಳಿ 22.7 ಕಿಲೋ ಮೀಟರ್‍ನ ನಾಲ್ಕು ಪಥದ ಯೋಜನೆಗೆ ಕೊನೆಗೂ ಹಸಿರು ನಿಶಾನೆ ತೋರಿದೆ.
ಮೈಸೂರು ಹಾಗೂ ಕುಶಾಲನಗರದ ನಡುವಿನ ರಾಷ್ಟ್ರೀಯ ಹೆದ್ದಾರಿ ಎನ್.ಎಚ್-275ರಲ್ಲಿ 92.5 ಕಿಲೋ ಮೀಟರ್‍ಗಳ ನಾಲ್ಕು ಪಥದ ಹೆದ್ದಾರಿ ನಿರ್ಮಾಣ ಯೋಜನೆ ಇದಾಗಿದೆ. ಹೆಚ್ಚು ವಾಹನ ದಟ್ಟಣೆಯ ದ್ವಿಪಥ ಹೆದ್ದಾರಿಯಲ್ಲಿ ಸಲಿಸಾಗಿ ವಾಹನಗಳ ಸಂಚಾರ ಕಷ್ಟ ಸಾಧ್ಯವಾಗಿತ್ತು. ಇದರಿಂದ ಅಲ್ಲಲ್ಲಿ ಅಪಘಾತಗಳು ಸಂಭವಿಸುತ್ತಿದ್ದವು. ಈ ಹಿನ್ನೆಲೆ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಮಂಡ್ಯದಲ್ಲಿ 2023ರ ಮಾ.2ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. 5 ಪ್ಯಾಕೇಜ್‍ನಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯಲ್ಲಿ ಈಗಾಗಲೇ ಮೊದಲ ಪ್ಯಾಕೇಜ್ ಕಾಮಗಾರಿ ಆರಂಭಗೊಂಡಿದೆ. ಆದರೆ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ವಿಳಂಬವಾದ ಕಾರಣ ಪ್ಯಾಕೇಜ್ 2ರ ಕಾಮಗಾರಿ ವಿಳಂಬವಾಗಿತ್ತು. ಆದರೆ, ಈಗ ಪ್ಯಾಕೇಜ್ 2ರ ಕಾಮಗಾರಿ ಶೀಘ್ರವೇ ಶುರುವಾಗಲಿದೆ.
ಐದು ಪ್ಯಾಕೇಜ್ ಯೋಜನೆ: ಮೈಸೂರು ಹಾಗೂ ಕುಶಾಲನಗರ ಹೆದ್ದಾರಿಯನ್ನು ಐದು ಪ್ಯಾಕೇಜ್‍ಗಳಾಗಿ ವಿಂಗಡಿಸಿ ಕಾಮಗಾರಿ ನಡೆಸಲಾಗುತ್ತಿದೆ. ಕುಶಾಲನಗರದಿಂದ ಮಡಿಕೇರಿವರೆಗೆ 22 ಕಿಲೋ ಮೀಟರ್ ಉದ್ದದ ಪ್ರಸ್ತಾವಿತ ರಸ್ತೆ ನಿರ್ಮಾಣ ಯೋಜನೆ ಅರಣ್ಯ ಪ್ರದೇಶಗಳ ಮೂಲಕ ಹಾದು ಹೋಗುವ ಹಿನ್ನೆಲೆ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದೆ.
ಕುಶಾಲನಗರ ಹಾಗೂ ಮಡಿಕೇರಿ ನಡುವಿನ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನೆಲೆ ಇದನ್ನು ನಿಭಾಯಿಸಲು ಅನುಕೂಲವಾಗುವಂತೆ ಬಸವನಹಳ್ಳಿಯಿಂದ ಹೆದ್ದಾರಿ ಅಗಲೀಕರಣ ಮಾಡುವ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಕೊಡಗು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಡಿ.ಎಂ.ಗಿರೀಶ್ ತಿಳಿಸಿದ್ದಾರೆ.
ಈ ಪ್ರಸ್ತಾವನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸಲಾಗುವುದು. ವಾಹನ ದಟ್ಟಣೆ ಹೆಚ್ಚಾಗಿ ರಸ್ತೆ ಕಿರಿದಾಗಿರುವ ಸ್ಥಳಗಳಲ್ಲಿ ಅಗಲೀಕರಣ ಮಾಡುವ ಸ್ಥಳ ಗುರುತಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ಯಾಕೇಜ್‍ಗಳ ವಿವರ: ಪ್ಯಾಕೇಜ್ 1 ಕುಶಾಲನಗರದಿಂದ ಮಡಿಕೇರಿವರೆಗಿನ 22 ಕಿಲೋಮೀಟರ್, ಪ್ಯಾಕೇಜ್ 2 ಗುಡ್ಡೆಹೊಸೂರಿನಿಂದ ಹಾಸನ-ಪಿರಿಯಾಪಟ್ಟಣ ರಸ್ತೆ ಜಂಕ್ಷನ್ 22.7 ಕಿಲೋಮೀಟರ್, ಪ್ಯಾಕೇಜ್ 3 ಹೆಮ್ಮಿಗೆ ಗ್ರಾಮ (ಹಾಸನ- ಪಿರಿಯಾಪಟ್ಟಣ ರಸ್ತೆ ಜಂಕ್ಷನ್) ರಾಮನಾಥಪುರ-ತೆರಕಣಾಂಬಿಗೆ ರಸ್ತೆ ಮತ್ತು ಹುಣಸೂರು ನಗರ ಜಂಕ್ಷನ್ – 24.1 ಕಿ.ಲೋ ಮೀಟರ್ ಹಾಗೂ ಪ್ಯಾಕೇಜ್ 4 ರಾಮನಾಥಪುರ-ತೆರಕಣಾಂಬಿ ರಸ್ತೆ ಮತ್ತು ಕೆ.ಆರ್.ನಗರ ಜಂಕ್ಷನ್‍ನಿಂದ ಯಲಚಹಳ್ಳಿ 26.5 ಕಿಲೋಮೀಟರ್ ವರೆಗೆ ಇರಲಿದ್ದು, ಪ್ಯಾಕೇಜ್ 5 ಯಲಚಹಳ್ಳಿಯಿಂದ ಶ್ರೀರಂಗಪಟ್ಟಣ ಬೈಪಾಸ್‍ನ ಪಶ್ಚಿಮವಾಹಿನಿ ಬಳಿ- 19 ಕಿಲೋ ಮೀಟರ್ ವರೆಗೆ ಇದೆ.


























