
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.05: ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕಾದುದು ಸರ್ಕಾರದ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಇತಿಹಾಸ ಪ್ರಸಿದ್ದ ಪ್ರವಾಸಿತಾಣ ರಾಯಸಮುದ್ರಕ್ಕೆ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಮೇಲುಕೋಟೆ ಮುಖ್ಯ ರಸ್ತೆಯಿಂದ ರಾಯಸಮುದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಂದು ಕೋಟಿ ಎಪ್ಪತ್ತೈದು ಲಕ್ಷ ರೂಪಾಯಿಗಳ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ರಾಯಸಮುದ್ರ ಗ್ರಾಮವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಗ್ರಾಮವಾಗಿದ್ದು ಇಡೀ ಶ್ರೀನಾರಾಯಣದುರ್ಗದ ಬೆಟ್ಟವು ಏಕಶಿಲೆಯಲ್ಲಿ ನಿರ್ಮಾಣವಾಗಿದ್ದು ಪುರಾತನ ಕಾಲದಲ್ಲಿಯೇ ಪಾಂಡವರು ಇಲ್ಲಿಗೆ ಬಂದಿದ್ದಕ್ಕೆ ಅನೇಕ ಕುರುಹುಗಳಿವೆ. ಇಂಥಹ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಗ್ರಾಮದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನಗಳಲ್ಲಿ ತಿರುಗಾಡಲೂ ಸಾಧ್ಯವಿಲ್ಲದಂತಾಗಿದೆ. ಇದನ್ನು ಅರಿತು ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. ನಾನು ಶಾಸಕನಾದ ನಂತರ ಮೊದಲ ಒ.ಆರ್.ಎಫ್ ಅನುದಾನ ನೀಡಲಾಗಿದೆ. ಗುತ್ತಿಗೆದಾರರು ಗುಣಮಟ್ಟವನ್ನು ಕಾಪಾಡಿಕೊಂಡು ಆದಷ್ಟು ವೇಗವಾಗಿ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರಿಗೆ ಓಡಾಡಲು ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಮಂಜುನಾಥ್, ಎ.ಇ ಬಸವೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಕೆ.ಯೋಗೇಶ್, ಗುತ್ತಿಗೆದಾರ ರೇವಣ್ಣ, ಗ್ರಾಪಂ ಅಧ್ಯಕ್ಷ ಅಶೋಕ್ ಭೈರಾಪುರ ಹರೀಶ್, ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಧ್ರುವಕುಮಾರ್, ಸೇರಿದಂತೆ ಹಲವರು ಹಾಜರಿದ್ದರು.