ರಾಮಾಯಣ ಬದುಕಿನ ಪರಿವರ್ತನೆಯ ಸಂದೇಶ- ಸ್ಟೆಲ್ಲಾ ವರ್ಗೀಸ್

ಪುತ್ತೂರು; ಶ್ರೇಷ್ಠ ಕಾವ್ಯವಾದ ರಾಮಾಯಣದ ಮೂಲಕ ಬದುಕಿನ ತತ್ವಗಳನ್ನು ನಿರೂಪಿಸಿದ ಮಹರ್ಷಿ ವಾಲ್ಮೀಕಿ ಅವರ ಸಂದೇಶ ಮನಸ್ಸಾಕ್ಷಿ ಇದ್ದವರನ್ನು ಸಂಪೂರ್ಣ ಬದಲಾವಣೆ ಮಾಡುತ್ತದೆ. ವೈಯುಕ್ತಿಕ ಜೀವನದಲ್ಲಿ ಪರಿವರ್ತನೆಯನ್ನು ತರಬಲ್ಲದು. ಅವರ ಸಾಮಾಜಿಕವಾದ ಬದಲಾವಣೆಯ ಪೂರಕ ಸಂದೇಶಗಳು ಯಾವತ್ತಿಗೂ ಅಜರಾಮರ ಎಂದು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಅಭಿಪ್ರಾಯಪಟ್ಟರು.
ಮಂಗಳವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಪಂ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ತಪ್ಪು ಮಾರ್ಗ ಹಿಡಿದಿದ್ದ ವ್ಯಕ್ತಿಯೋರ್ವ ಪರಿವರ್ತನೆಗೊಂಡು ಆದರ್ಶ ಬದುಕಿನ ಕಾವ್ಯವನ್ನು ಸೃಷ್ಟಿ ಮಾಡುವ ಮೂಲಕ ಇಂದಿನ ಸಮಾಜಕ್ಕೂ ಉತ್ತಮ ಸಂದೇಶ ನೀಡಿದ್ದಾರೆ. ಈ ಸಂದೇಶ ಇಂದಿನ ಜನತೆಯ ಮನಸ್ಸಿನ ಮೇಲೂ ಪರಿಣಾಮ ಬೀರುವ ಶಕ್ತಿ ಹೊಂದಿದೆ. ರಾಮಾಯಣದಲ್ಲಿರುವ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಸಮಾಜಕ್ಕೆ ನಿಜಾರ್ಥದ ಸಂಪತ್ತಾಗಬಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅಕ್ಷಯ ಕಾಲೇಜಿನ ಉಪನಾಸಕಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಅವರು, ಸತ್ಯ ಧರ್ಮ ಹಾಗೂ ನಿಷ್ಠೆಯನ್ನು ಜಗತ್ತಿಗೆ ಸಾರಿದ ಮಹರ್ಷಿ ವಾಲ್ಮೀಕಿ ಸಾಮಾಜಿಕ ಅಭಿವೃದ್ಧಿಯ ಸಂದೇಶವನ್ನು ನೀಡಿದ್ದಾನೆ. ಯಾರನ್ನೋ ಆದರ್ಶವಾಗಿಸುವ ಬದಲು ನಮಗೆ ನಾವೇ ಆದರ್ಶವಾಗಬೇಕು ಎಂಬ ಸತ್ಯವನ್ನು ಶ್ರೀರಾಮನ ಮೂಲಕ ಸಾರಿದ್ದಾನೆ. ಧರ್ಮ,ಜಾತಿಗಿಂತಲೂ ಸ್ವಚ್ಛ ಬದುಕು ಅಗತ್ಯ ಎಂಬ ನಿಲುವು ರಾಮಾಯಣದ ಉದ್ದಕ್ಕೂ ನಾವು ಕಾಣಬಹುದು. ಇಂತಹ ಶ್ರೇಷ್ಠವಾದ ಕಾವ್ಯ ಸೂರ್ಯ-ಚಂದ್ರ ಇರವ ತನಕವೂ ನಮ್ಮೊಂದಿಗೆ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ನಾಗರಾಜ್ ಅವರು ಮಾತನಾಡಿ, ವಾಲ್ಮೀಕಿ ಸಮಾಜದ ಜನತೆ ತಮ್ಮ ಮಕ್ಕಳಿಗೆ ವಿದ್ಯೆಯನ್ನು ಸಮರ್ಪಕವಾಗಿ ನೀಡುವಲ್ಲಿ ಮುಂದಾಗಬೇಕು. ಇದು ಸಮಾಜದ ಅಭಿವೃದ್ಧಿಗೆ ಪೂರಕ. ಇದನ್ನೇ ವಾಲ್ಮೀಕಿ ರಾಮಾಯಣದ ಸತ್ಯಗಳೊಂದಿಗೆ ವಿವರಿಸಿದ್ದಾನೆ ಎಂದರು.
ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ್, ನಗರಸಭೆಯ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಮಾತನಾಡಿದರು. ವಾಲ್ಮೀಕಿ ಸಮಾಜದ ಮುಖಂಡ ರಾಜು ಬಪ್ಪಳಿಗೆ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕಿ ಸುನಿತಾ ಕುಮಾರಿ ಸ್ವಾಗತಿಸಿದರು. ಕೊಂಬೆಟ್ಟು ವಸತಿನಿಲಯದ ಮೇಲ್ವಿಚಾರಕಿ ಸವಿತಾ ವಂದಿಸಿದರು. ಶ್ರೀಕಲಾ ಕಾರ್ಯಕ್ರಮ ನಿರೂಪಿಸಿದರು.